ಮುಂಬೈನ ಪೊಲೀಸ್ ಕಮಿಷ್ನರ್ ಭೇಟಿ ಮಾಡಿದ್ದಾರೆ ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್. ಅವರಿಗೆ ಜೀವ ಬೆದರಿಕೆ ಇರುವ ಕಾರಣಕ್ಕಾಗಿ ಈ ಭೇಟಿ ನಡೆದಿದೆ ಎಂದು ಹೇಳಲಾಗಿತ್ತು. ತಮಗೆ ಮತ್ತು ತಮ್ಮ ತಂದೆಗೆ ಜೀವ ಬೆದರಿಕೆ ಇರುವ ಕಾರಣಕ್ಕಾಗಿ ಗನ್ ಇಟ್ಟುಕೊಳ್ಳಲು ಪರವಾನಿಗೆ ನೀಡುವಂತೆ ಅವರು ಮನವಿ ಸಲ್ಲಿಸಿದ್ದಾರಂತೆ. ನಿನ್ನೆ ಸಂಜೆ ಈ ಭೇಟಿ ನಡೆದಿದ್ದು, ಸಲ್ಮಾನ್ ಬೇಡಿಕೆಯನ್ನು ಪರಿಶೀಲಿಸುವುದಾಗಿ ಕಮಿಷ್ನರ್ ಹೇಳಿದ್ದಾರೆ ಎನ್ನಲಾಗುತ್ತಿದೆ.
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಮಾಡಿದ ಹಂತಕರೇ ಸಲ್ಮಾನ್ ಖಾನ್ ಮತ್ತು ಅವರ ತಂದೆಗೆ ಜೀವ ಬೆದರಿಕೆಯ ಪತ್ರವನ್ನು ಬರೆದಿದ್ದರು. ಈ ಬೆದರಿಕೆ ಪತ್ರವನ್ನು ಬರೆದವರು ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಕಡೆಯವರು ಎಂದು ಹೇಳಲಾಗಿತ್ತು. ಅಲ್ಲದೇ, ಮೊನ್ನೆಯಷ್ಟೇ ಈ ಗ್ಯಾಂಗ್ ನ ಕೆಲವು ಸದಸ್ಯರನ್ನು ಎನ್ ಕೌಂಟರ್ ಮಾಡಿ ಕೊಲ್ಲಲಾಗಿದೆ. ಹಾಗಾಗಿ ಮತ್ತಷ್ಟು ದ್ವೇಷ ಹೆಚ್ಚಾಗಬಹುದು ಎನ್ನುವ ಆತಂಕ ಸಲ್ಮಾನ್ ಖಾನ್ ಅವರದ್ದು. ಇದನ್ನೂ ಓದಿ:ಚಿಕ್ಕಣ್ಣನ ಮದುವೆ ಮುಂದಿನ ವರ್ಷ ಫಿಕ್ಸ್: ಕುಟುಂಬದ ಒತ್ತಡಕ್ಕೆ ಕೊನೆಗೂ ಮಣಿದ ನಟ
ಲಾರೆನ್ಸ್ ಬಿಷ್ಣೋಯ್ ಟೀಮ್ ತುಂಬಾ ಸ್ಟ್ರಾಂಗ್ ಆಗಿದ್ದು, ಈಗಾಗಲೇ ಸಲ್ಮಾನ್ ಕೊಲ್ಲಲು ಹಲವು ರೀತಿಯ ಸಂಚುಗಳನ್ನು ರೂಪಿಸಿದ್ದರು ಎಂದು ಹೇಳಲಾಗಿತ್ತು. ಈಗಾಗಲೇ ಅರೆಸ್ಟ್ ಆದ ಕೆಲವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು ಅವರು ಆತಂಕದ ಹೇಳಿಕೆಗಳನ್ನು ನೀಡಿದ್ದಾರಂತೆ. ಈ ಹಿನ್ನೆಲೆಯಾಗಿಟ್ಟುಕೊಂಡು ಸಲ್ಮಾನ್, ಕಮಿಷ್ನರ್ ಜೊತೆ ಮಾತುಕತೆ ಆಡಿದ್ದಾರೆ ಎಂದು ಹೇಳಲಾಗುತ್ತಿದೆ. ಬೆದರಿಕೆ ನೆಪವಿಟ್ಟುಕೊಂಡು ಗನ್ ಲೈಸನ್ಸ್ ಕೊಡ್ತಾರಾ ಅಥವಾ ಇಲ್ಲವಾ ಎನ್ನುವುದನ್ನು ಕಾದು ನೋಡಬೇಕು.