ಸಲಾರ್ (Salaar) ಮೆರವಣಿಗೆ ಹೊರಡಲು ಸಜ್ಜಾಗಿದೆ. ಮುಂದಿನ ತಿಂಗಳು ಸಿನಿಮಾ ತೆರೆ ಕಾಣುತ್ತಿದೆ. ಆದರೆ ಟ್ರೈಲರ್ ಬಗ್ಗೆ ಮಾತೇ ಇಲ್ಲ. ಯಾವಾಗ ಪ್ರಭಾಸ್ ದಿಬ್ಬಣ ಹೊರಡುತ್ತಾರೆ? ಯಾವಾಗ ತೋರಿಸುತ್ತೀರಿ ಡೈನೋಸಾರ್ ಹೂಂಕಾರ ? ಫ್ಯಾನ್ಸ್ ಕೇಳುತ್ತಿದ್ದರು. ಇದೀಗ ಅದಕ್ಕೆ ಉತ್ತರ ಸಿಕ್ಕಂತಿದೆ. ಟ್ರೈಲರ್ ಇಂಚಿಂಚು ವಿವರ ಇಲ್ಲಿದೆ.
ಪ್ರಭಾಸ್‌ಗೆ (Prabhas) ಇದು ಅಗ್ನಿ ಪರೀಕ್ಷೆ. ಸತತ ಮೂರು ಸೋಲು ಅವರನ್ನು ಹಿಂಡಿ ಹಿಪ್ಪೆ ಮಾಡಿವೆ. ಸಲಾರ್ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಜೊತೆಗೆ ಗೆದ್ದೇ ಗೆಲ್ಲುತ್ತದೆ ಎನ್ನುವ ನಂಬಿಕೆ ಇದೆ. ಕಾರಣ ಪ್ರಶಾಂತ್ ನೀಲ್. ಮೂರೇ ಸಿನಿಮಾದ ಒಡೆಯ ನೀಲ್ ನೀಡಿರುವ ಭರವಸೆ. ಹೀಗಾಗಿ ಕೆಜಿಎಫ್ ಸಾರಥಿಗೆ ಎಲ್ಲ ರೀತಿ ಸಮರ್ಪಿಸಿಕೊಂಡಿದ್ದಾರೆ ಬಾಹುಬಲಿ. ಅದಕ್ಕೇ ವಿಶ್ವ ಇಷ್ಟಗಲ ಕಣ್ಣು ಬಿಟ್ಟಿದೆ. ಈಗ ಟ್ರೈಲರ್ ಬಿಡುಗಡೆ ವಿಚಾರ ಬೆಂಕಿ ಹೊತ್ತಿಸಿದೆ. ಬಹುಶಃ ಸೆಪ್ಟೆಂಬರ್ 6ರಂದು ಸಲಾರ್ ಸಿಹಿ ಹಂಚಲಿದೆ. ಇದನ್ನೂ ಓದಿ:ವಿಜಯ್ ಪ್ರಕಾಶ್ ಧ್ವನಿಯಲ್ಲಿ ‘ಜಲಪಾತ’ ಸಾಂಗ್
ಈಗಾಗಲೇ ಟೀಸರ್ ಹೊರ ಬಂದಿದೆ. ಅದನ್ನು ನೋಡಿದ ಕೆಲವರು ಬೇಸರ ಮಾಡಿಕೊಂಡಿದ್ದರು. ಕಾರಣ ಪ್ರಭಾಸ್ ಮುಖ ಸರಿಯಾಗಿ ತೋರಿಸಿಲ್ಲ ಎನ್ನುವ ಆರೋಪ. ಅದನ್ನು ಪೂರ್ತಿ ಮಾಡಲು ನೀಲ್ ರೆಡಿಯಾಗಿದ್ದಾರೆ. ಈಗಾಗಲೇ ಟ್ರೈಲರ್ ಸೆನ್ಸಾರ್ ಕೂಡ ಆಗಿದೆ. ಎರಡು ನಿಮಿಷ ನಲವತ್ತೇಳು ಸೆಕೆಂಡ್ ಇದರ ಅವಧಿ. ಹೆಚ್ಚು ಕಮ್ಮಿ ಮೂರು ನಿಮಿಷ. ಇದನ್ನು ಕೇಳಿಯೇ ಡಾರ್ಲಿಂಗ್ ಭಕ್ತಗಣ ರಣಕೇಕೆ ಹಾಕುತ್ತಿದೆ. ಅದ್ಯಾವ ರೀತಿ ಪ್ರಭಾಸ್ ಘರ್ಜಿಸಿರಬಹುದು? ಹೇಗೆ ಕಾಣಬಹುದು? ಊಹೆ ಆಕಾಶಕ್ಕೇರಿದೆ.
ಅಂದಹಾಗೆ ಟ್ರೈಲರ್ ರಿಲೀಸ್ ಕಾರ್ಯಕ್ರಮವನ್ನು ಹೈದ್ರಾಬಾದ್‌ನಲ್ಲಿ ನಡೆಸಲು ಸಿದ್ಧತೆಯಾಗುತ್ತಿದೆ. ಹೊಂಬಾಳೆ ಸಂಸ್ಥೆ ಎಲ್ಲ ವ್ಯವಸ್ಥೆ ಮಾಡುತ್ತಿದೆ. ಅಂದು ಯರ‍್ಯಾರು ಬರುತ್ತಾರೆ? ಇಲ್ಲ ಗೊತ್ತಿಲ್ಲ. ಆದರೆ ಒಂದು ಮೂಲದ ಪ್ರಕಾರ ರಾಕಿಭಾಯ್ (Yash) ಮುಖ್ಯ ಅತಿಥಿಯಾಗಲಿದ್ದಾರಂತೆ. ಹೊಂಬಾಳೆಯಿಂದಲೇ (Hombale Films) ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟ ಪಡೆದಿದ್ದಾರೆ ಯಶ್. ಆ ಸಂಸ್ಥೆ ಕೊಟ್ಟ ಅವಕಾಶದಿಂದ ವಿಶ್ವದ ತುಂಬಾ ಹೆಸರು ಮಾಡಿದ್ದಾರೆ. ಹೀಗಿರುವಾಗ ಅತಿಥಿಯಾಗಲು ಇಲ್ಲ ಎನ್ನುತ್ತಾರಾ? ಪ್ರಭಾಸ್-ಯಶ್ ಮೆರವಣಿಗೆಗೆ ಸಜ್ಜಾಗಿ.