ಪ್ರಭಾಸ್ (Prabhas) ನಟನೆಯ ಸಲಾರ್ ಸಿನಿಮಾ ಬಾಕ್ಸಾಫೀಸಿನಲ್ಲಿ ಸಖತ್ ಸದ್ದು ಮಾಡಿತ್ತು. ಈಗಲೂ ಕೆಲವರು ಸಲಾರ್ ಸಿನಿಮಾದ ಗುಂಗಿನಲ್ಲೇ ಇದ್ದಾರೆ. ಈ ನಡುವೆ ಸಲಾರ್ 2 (Salaar 2) ಸಿನಿಮಾದ ಬಗ್ಗೆ ಒಂದಷ್ಟು ಮಾಹಿತಿಗಳು ಹೊರ ಬಿದ್ದಿದ್ದವು. ಇದೇ ಏಪ್ರಿಲ್ ಕೊನೆಯ ವಾರದಿಂದ ಸಲಾರ್ 2 ಚಿತ್ರದ ಶೂಟಿಂಗ್ ಕೆಲಸದಲ್ಲಿ ನಿರ್ದೇಶಕ ಪ್ರಶಾಂತ್ ನೀಲ್ (Prashant Neel) ತೊಡಗಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಸದ್ಯಕ್ಕೆ ಸಲಾರ್ ಅನುಮಾನ ಎನ್ನುವ ಮಾಹಿತಿ ಹೊರ ಬಿದ್ದಿದೆ.
ಸದ್ಯ ಪ್ರಭಾಸ್ ಕಲ್ಕಿ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಕಲ್ಕಿ ಮುಗಿಯುತ್ತಿದ್ದಂತೆಯೇ ‘ದಿ ರಾಜ ಸಾಬ್’ ಸಿನಿಮಾದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಬೇಕಿದೆ. ಇದರ ನಂತರ ಸ್ಪಿರಿಟ್ ಚಿತ್ರಕ್ಕೆ ಅವರು ಕಾಲ್ ಶೀಟ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಎರಡೂ ಸಿನಿಮಾ ಮುಗಿಯೋಕೆ ಕನಿಷ್ಠ ಎರಡು ವರ್ಷಗಳಾದರೂ ಬೇಕು. ಹಾಗಾಗಿ ಸದ್ಯಕ್ಕೆ ಸಲಾರ್ 2 ಸೆಟ್ಟೇರುವುದು ಅನುಮಾನ.
ಈ ಹಿಂದೆ ಆಂಗ್ಲ ವೆಬ್ ಸೈಟ್ ಜೊತೆ ನಿರ್ಮಾಪಕ ವಿಜಯ ಕಿರಗಂದೂರು (Vijaya Kirgandur) ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದರು. ಅದರ ಪ್ರಕಾರ ಸಲಾರ್ 2 ಸಿನಿಮಾ 2025ರಲ್ಲಿ ಬಿಡುಗಡೆ ಆಗಲಿದೆಯಂತೆ. ಇನ್ನೂ ಅಚ್ಚರಿಯ ಸಂಗತಿ ಅಂದರೆ, ಈಗಾಗಲೇ ಸಲಾರ್ 2 ಸಿನಿಮಾದ ಸ್ಕ್ರಿಪ್ಟ್ ರೆಡಿಯಾಗಿದ್ದು, ಸಲಾರ್ ಸಿನಿಮಾಗಿಂತಲೂ ಸಲಾರ್ 2 ಇನ್ನೂ ಅದ್ಧೂರಿಯಾಗಿ ಇರಲಿದೆ ಎಂದು ವಿಜಯ್ ತಿಳಿಸಿದ್ದರು.
‘ಸಲಾರ್ ’ ಪ್ಯಾನ್ ಇಂಡಿಯಾ ಚಿತ್ರವಾದರೂ, ಈ ಚಿತ್ರದ ಹಿಂದಿರುವ ತಾಂತ್ರಿಕ ತಂಡದವರೆಲ್ಲರೂ ಕನ್ನಡದವರಾಗಿದ್ದರು. ನಿರ್ಮಾಪಕರಾದ ವಿಜಯ್ ಕಿರಗಂದೂರು, ನಿರ್ದೇಶಕ ಪ್ರಶಾಂತ್ ನೀಲ್ , ಛಾಯಾಗ್ರಾಹಕ ಭುವನ್ ಗೌಡ, ಸಂಗೀತ ನಿರ್ದೇಶಕ ರವಿ ಬಸ್ರೂರು, ಕಲಾ ನಿರ್ದೇಶಕ ಶಿವಕುಮಾರ್ ಸೇರಿದಂತೆ ಚಿತ್ರದಲ್ಲಿ ಕೆಲಸ ಮಾಡಿರುವ ಹಲವು ತಂತ್ರಜ್ಞರು ಹಾಗೂ ಕಲಾವಿದರು ಈ ನೆಲದ ಮಣ್ಣಿನವರಾಗಿದ್ದು, ಇದು ಕನ್ನಡದ ಪ್ರತಿಭಾ ಸಂಪತ್ತಿನ ಒಂದು ಉದಾಹರಣೆಯಷ್ಟೇ.