ಕೆಂಡ, ಕೆಂಡದಂತಹ ಸಿನಿಮಾ ಮಾಡಬೇಕು, ಬೆಳ್ಳಿಭೂಮಿ ಮೇಲೆ ನಮ್ಮ ಸಿನಿಮಾ ಧಗಧಗಿಸಬೇಕು. ನಮ್ಮ ಮೂವೀ ಹಚ್ಚುವ ಕಿಚ್ಚಿಗೆ ಬಾಕ್ಸ್ ಆಫೀಸ್ ಖಲ್ಲಾಸ್ ಆಗ್ಬೇಕು ಅಂತ ಸಾಕಷ್ಟು ಸಿನಿಮಾಮಂದಿ ಕನಸು ಕಾಣ್ತಾರೆ. ಆದರೆ, ಇಲ್ಲೊಂದು ಚಿತ್ರತಂಡ `ಕೆಂಡ’ (Kenda) ಅಂತಾನೇ ಟೈಟಲ್ ಇಟ್ಕೊಂಡು ಕಣಕ್ಕಿಳಿದಿದೆ. ಬರೀ ಶೀರ್ಷಿಕೆಯಿಂದಲೇ ಕುತೂಹಲ ಕೆರಳಿಸುವಲ್ಲಿ, ಗಾಂಧಿನಗರದ ತುಂಬೆಲ್ಲಾ ಸದ್ದು ಸುದ್ದಿ ಮಾಡುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಮೂಲ ಕಾರಣ `ಕೆಂಡ’ ರೂವಾರಿಗಳಾದ ರೂಪಾ (Roopa Rao) ರಾವ್ ಹಾಗೂ ಸಹದೇವ್ ಕೆಲವಡಿ.
Advertisement
ರೂಪಾ ರಾವ್ ಹಾಗೂ ಸಹದೇವ್ ಕೆಲವಡಿ (Sahadev Kelavadi) ಜೊತೆಗೂಡಿ ಕನ್ನಡದಲ್ಲಿ `ಗಂಟುಮೂಟೆ’ ಹೆಸರಿನ ಸಿನಿಮಾ ಮಾಡಿದ್ದರು. ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದ ರೂಪಾ ರಾವ್ ಜೊತೆ ಸಹದೇವ್ ಕೈ ಜೋಡಿಸಿದ್ದರು. ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ಚಿತ್ರಕ್ಕೆ ಬಂಡವಾಳ ಹೂಡುವುದರ ಜೊತೆಗೆ `ಗಂಟುಮೂಟೆ’ಗೆ ಕ್ಯಾಮೆರಾ ಕೈಚಳಕ ತೋರಿದ್ದರು. ಈ ಚಿತ್ರ ಪ್ರೇಕ್ಷಕರಿಂದ ಮೆಚ್ಚುಗೆ ಪಡೆಯುವುದರ ಜೊತೆಗೆ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್‍ನಲ್ಲಿ ಬೆಸ್ಟ್ ಸ್ಕ್ರೀನ್ ಪ್ಲೇ ಅವಾರ್ಡ್ ಮುಡಿಗೇರಿಸಿಕೊಂಡಿತ್ತು. ಈಗ ಎರಡನೇ ಪ್ರಯೋಗವೆಂಬಂತೆ ರೂಪಾ ರಾವ್ ಮತ್ತು ಸಹದೇವ್ ಕೆಲವಡಿ `ಕೆಂಡ’ದ ಮೂಲಕ ಅಖಾಡಕ್ಕಿಳಿಯಲು ರೆಡಿಯಾಗಿದ್ದಾರೆ.
Advertisement
Advertisement
ವಿದೇಶಗಳಲ್ಲಿ ಸಿನಿಮಾ ಬಗ್ಗೆ ಅಧ್ಯಯನ ನಡೆಸಿ ಬಂದು, ತನ್ನ ಮಾತೃ ಭಾಷೆಯಲ್ಲಿಯೇ ಸಿನಿಮಾ ಮಾಡಬೇಕೆಂಬ ಬಯಕೆ ಹೊಂದಿದ್ದವರು ಸಹದೇವ್ ಕೆಲವಡಿ. ಅದರ ಆರಂಭಿಕ ಹೆಜ್ಜೆಯಾಗಿ ರೂಪಾ ರಾವ್ ಅವರ ಜೊತೆಗೂಡಿ ನಿರ್ಮಾಣ ಸಂಸ್ಥೆಗೆ ಚಾಲನೆ ನೀಡಿದ್ದರು. ಇದೀಗ ಅವರೇ ಕೆಂಡದ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಇಂಗ್ಲಿಷ್, ಹಿಂದಿ, ಜರ್ಮನ್ ಹೀಗೆ ಪರಭಾಷೆಯಲ್ಲಿ ಶಾರ್ಟ್‍ಫಿಲ್ಮ್, ಡಾಕ್ಯೂಮೆಂಟರಿ, ವೆಬ್‍ಸೀರೀಸ್‍ಗಳನ್ನು ಮಾಡಿ ಸೈ ಎನಿಸಿಕೊಂಡು `ಗಂಟುಮೂಟೆ’ ಮೂಲಕ ಕನ್ನಡಿಗರಿಂದ ಭೇಷ್ ಎನಿಸಿಕೊಂಡ, ಬೆಂಗಳೂರು ಮೂಲದ ಮಹಿಳಾ ನಿರ್ದೇಶಕಿ ರೂಪಾ ರಾವ್ ಸಹದೇವ್‍ಗೆ ಸಾಥ್ ನೀಡಿದ್ದಾರೆ. ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲೇ `ಕೆಂಡ’ ಚಿತ್ರ ತಯ್ಯಾರಾಗಿದ್ದು, ಈಗಾಗಲೇ ಶೂಟಿಂಗ್ ಕಂಪ್ಲೀಟ್ ಆಗಿದೆ. ಗೌರಿ-ಗಣೇಶ ಹಬ್ಬಕ್ಕೆ ಸ್ಪೆಷಲ್ಲಾಗಿ ರಿಲೀಸ್ ಆಗಿರುವ ಮೋಷನ್ ಪೋಸ್ಟರ್ ಸಿನಿಮಾ ಪ್ರೇಮಿಗಳ ಗಮನ ಸೆಳೆಯುತ್ತಿದೆ. ಮತ್ತೊಂದು ಭಿನ್ನ ಕಥಾನಕದ ಚಿತ್ರ ಕನ್ನಡದ ಸಿನಿಮಾ ಪ್ರೇಮಿಗಳ ಮುಂದೆ ಬರಲು ಸಜ್ಜಾಗಿ ನಿಂತಿದೆ.
Advertisement
ಬೆಂಗಳೂರಿನಂಥಾ ಮಹಾನಗರಿಯಲ್ಲಿ ನಾನಾ ನಿರಾಸೆಗೊಳಗಾದ ಯುವ ಸಮೂಹ, ರಾಜಕೀಯ, ಅಪರಾಧ ಸೇರಿದಂತೆ ಒಂದಷ್ಟು ಸಾಮಾಜಿಕ ಅಂಶಗಳನ್ನಿಟ್ಟುಕೊಂಡು ಈ ಚಿತ್ರ ತಯಾರುಗೊಂಡಿದೆ. ಫೌಂಡ್ರಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವ ಹೇಗೆ ಈ ವ್ಯವಸ್ಥೆಯ ವಿಷ ವ್ಯೂಹಕ್ಕೆ ಸಿಲುಕುತ್ತಾನೆ, ಆತನನ್ನು ಪಟ್ಟಭದ್ರರು ಹೇಗೆಲ್ಲ ಬಳಸಿಕೊಳ್ಳುತ್ತಾರೆ, ಆ ಕ್ಷಣದೊಂದು ನಿರ್ಧಾರ ಆತನ ಬದುಕನ್ನು ಯಾವ ದಿಕ್ಕಿನತ್ತ ಮುನ್ನಡೆಸುತ್ತೆ ಎಂಬಿತ್ಯಾದಿ ಕುತೂಹಲಕರ ತಿರುವುಗಳೊಂದಿಗೆ ‘ಕೆಂಡ’ ಚಿತ್ರ ಕೆಂಡದಂತಾಗಿದೆ. ಒಟ್ಟಾರೆಯಾಗಿ, ಇದೊಂದು ಈ ದಿನಮಾನದ ಮಟ್ಟಿಗೆ ವಿಭಿನ್ನ ಚಿತ್ರವಾಗಲಿದೆ ಎಂಬಂಥಾ ತುಂಬು ಭರವಸೆ ಚಿತ್ರತಂಡದಲ್ಲಿದೆ.
ವಿಶೇಷವೆಂದರೆ, ತಾರಾಗಣವೆಲ್ಲ ಹೊಸಬರಿಂದಲೇ ತುಂಬಿಕೊಂಡಿದೆ. ರಂಗಭೂಮಿ ಪ್ರತಿಭೆಗಳಿಲ್ಲಿ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಬಿ.ವಿ ಭರತ್, ಪ್ರಣವ್ ಶ್ರೀಧರ್, ವಿನೋದ್ ರವೀಂದ್ರನ್, ಗೋಪಾಲ್ ಕೃಷ್ಣ ದೇಶಪಾಂಡೆ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ. ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ (Rithvik Kaykini) ಈ ಸಿನಿಮಾ ಮೂಲಕ ಸಂಗೀತ ನಿರ್ದೇಶಕರಾಗುತ್ತಿದ್ದಾರೆ. ಕಥೆಯೊಂದಿಗೇ ಹೊಸೆದುಕೊಂಡಂತಹ ಎರಡು ಹಾಡುಗಳಿಗೆ ಖುದ್ದು ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.
ಆಸ್ಕರ್ ಪ್ರಶಸ್ತಿ ವಿಜೇತ ಎಲಿಫೆಂಟ್ ವಿಸ್ಪರರ್ಸ್ ಚಿತ್ರದ ಭಾಗವಾಗಿದ್ದ ಶ್ರೇಯಾಂಕ್ ನಂಜಪ್ಪ ಕೆಂಡ ಚಿತ್ರಕ್ಕೆ ಶಬ್ಧ ಸಂಯೋಜನೆ ಮಾಡಿದ್ದಾರೆ. ಗಂಟುಮೂಟೆಯಂಥಾ ಚೆಂದದ ಸಿನಿಮಾ ಕೊಟ್ಟಿದ್ದ ತಂಡವೇ ಕೆಂಡದ ಸಾರಥ್ಯ ವಹಿಸಿರೋದರಿಂದಾಗಿ, ಈ ಚಿತ್ರ ಒಂದಷ್ಟು ಕುತೂಹಲ ಮೂಡಿಸಿದೆ. ಯುವ ಸಮೂಹದ ಕನಸು, ನಿರಾಸೆ, ತವಕ ತಲ್ಲಣಗಳನ್ನು ಹೊಂದಿರುವ ಈ ಚಿತ್ರ ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡಿದೆ. ಪೋಸ್ಟ್ ಪ್ರೊಡಕ್ಷನ್ ಕಾರ್ಯವೂ ಅಂತಿಮ ಘಟ್ಟದಲ್ಲಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಡುಗಡೆಯ ದಿನಾಂಕ ಅನೌನ್ಸ್ ಆಗಲಿದೆ.
Web Stories