– ಸದ್ಗುರು ದರ್ಶನ ಮಾಡಿ ಪುನೀತರಾದ ಭಕ್ತರು
ಚಿಕ್ಕಬಳ್ಳಾಪುರ: ಆವಲಗುರ್ಕಿ ಬಳಿಯ ಆದಿಯೋಗಿ (Adiyogi) ಈಶಾ ಕೇಂದ್ರಕ್ಕೆ ಇಂದು (ಡಿ.22) ಸದ್ಗುರು ಜಗ್ಗಿ ವಾಸುದೇವ್ (Sadhguru Jaggi Vasudev) ಭೇಟಿ ನೀಡಿದರು.
ಸದ್ಗುರು ಜಗ್ಗಿವಾಸುದೇವ್ ಆಗಮನದ ಹಿನ್ನಲೆ ಈಶಾ (Isha) ಸನ್ನಿಧಾನಕ್ಕೆ ಸಹಸ್ರಾರು ಮಂದಿ ಭಕ್ತರು ಆಗಮಿಸಿ ಸದ್ಗುರುಗಳ ದರ್ಶನ ಪಡೆದರು. ಭಕ್ತರಿಗೆ ಅಶೀರ್ವಚನ ಹಿತನುಡಿಗಳನ್ನು ಸದ್ಗುರು ಜಗ್ಗೀವಾಸುದೇವ್ ನುಡಿದರು.
ಇದಕ್ಕೂ ಮುನ್ನ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸದ್ಗುರು, ಈಶಾ ಸಂಸ್ಥೆ ವತಿಯಿಂದ ಗ್ರಾಮೋತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗುತ್ತಿದ್ದು, ಗ್ರಾಮೀಣ ಭಾಗದ ಜನ ಮದ್ಯವ್ಯಸನಿಗಳಾಗುತ್ತಿದ್ದಾರೆ. ಕೃಷಿ ಕಾಯಕ ಮಾಡಿ ಮದ್ಯ ಸೇವನೆ ಮಾಡಿ ಮಲಗಿಕೊಳ್ಳುತ್ತಿದ್ದಾರೆ. ಅವರ ಜೀವನದಲ್ಲಿ ಉತ್ಸಾಹ ಚೈತನ್ಯ ತುಂಬುವ ಸಲುವಾಗಿ ಗ್ರಾಮೀಣ ಭಾಗದವರಿಗೆ ಗ್ರಾಮೋತ್ಸವ ಕ್ರೀಡೆಗಳನ್ನ ಆಯೋಜನೆ ಮಾಡುವ ಮೂಲಕ ಮದ್ಯ ವ್ಯಸನ ಮುಕ್ತರನ್ನಾಗಿ ಮಾಡಲು ಶ್ರಮಿಸುತ್ತಿದ್ದೇವೆ. ಕ್ರೀಡೆಗಳ ಮೂಲಕ ಜಾತಿ ತಾರತಮ್ಯ ದೂರ ಮಾಡುತ್ತಿದ್ದೇವೆ ಎಂದರು.
ದೇಶದಲ್ಲಿ ಮಣ್ಣು ಸತ್ವ ಕಳೆದುಕೊಳ್ಳುತ್ತಿದೆ. ಪರಿಸರದಲ್ಲಿ ಸಮತೋಲನ ಕಾಪಾಡಬೇಕಿದೆ. ಲಾಭವಿಲ್ಲದ ವಿಚಾರಗಳ ಬಗ್ಗೆ ಯಾರೂ ಸಹ ಮಾತನಾಡುತ್ತಿಲ್ಲ. ಹಾಗಾಗಿ ಈಶಾ ಫೌಂಡೇಶನ್‌ನಿಂದಲೇ ರೈತ ಉತ್ಪಾದಕಾ ಕಂಪನಿಗಳ ಆರಂಭ ಮಾಡಲಾಗಿದೆ. ಮುಂದೆ ಮಿರಾಕಲ್ ಹೆಸರಿನ ಅಪ್ಲಿಕೇಶನ್ ಅಭಿವೃದ್ಧಿ ಮಾಡಲಾಗುತ್ತದೆ. ಈ ಮೂಲಕ ಪ್ರಪಂಚಾದ್ಯಂತ ಮುನ್ನೂರು ಕೋಟಿ ಜನರಿಗೆ ಏಕಕಾಲದಲ್ಲಿ ಧ್ಯಾನದ ಸಂದೇಶದ ಜೀವನ ನಿರ್ವಹಣೆ ಬಗ್ಗೆ ಮಾರ್ಗದರ್ಶನ ನೀಡುವ ಮೂಲಕ ಜೀವನ ಉತ್ತಮಪಡಿಸುವ ಕನಸು ಕಂಡಿದ್ದೇವೆ ಅಂತ ಸದ್ಗುರು ತಿಳಿಸಿದರು. ಇದನ್ನೂ ಓದಿ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿಲ್ಲ ಪಶು ವೈದ್ಯರು – ಪ್ರಾಣಿಗಳು ಸತ್ತರೆ ಬಂಡೀಪುರ, ಮೈಸೂರು ಪಶು ವೈದ್ಯರಿಂದ ಮರಣೋತ್ತರ ಪರೀಕ್ಷೆ
ಇದೇ ವೇಳೆ ಬಾಂಗ್ಲಾದೇಶದಲ್ಲಿ (Bangladesh) ಹಿಂದೂಗಳ ಮೇಲಿನ ದಾಳಿ ಖಂಡಿಸಿದ ಸದ್ಗುರು, ಬಾಂಗ್ಲಾದೇಶ ಉದ್ಬವವಾಗಲು ಭಾರತದ ಕೊಡುಗೆ ಮರೆಯುವಂತಿಲ್ಲ. ಭಾರತದ ಪಕ್ಕದಲ್ಲೇ ಮಿತ್ರ ದೇಶವಾಗಿ ಇರಲಿ ಅಂತ ಸಹಕಾರ ನೀಡಿದೆ. ಆದರೆ ಹಿಂದೂಗಳ ಮೇಲೆ ದಾಳಿ ನಡೆಯುತ್ತಿದ್ದು ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒತ್ತಾಯ ಮಾಡಿದ್ದೇವೆ ಎಂದರು.
ಎಲೆಕ್ಟ್ರಿಕಲ್ ವಾಹನಗಳಿಂದ ಪರಿಸರಕ್ಕೆ ಅನುಕೂಲವಿಲ್ಲ. ನನ್ನ ಹೇಳಿಕೆ ವಿವಾದವಾದರೂ ಪರವಾಗಿಲ್ಲ. ನಗರ ಪ್ರದೇಶಗಳಿಗೆ ಮಾತ್ರ ಎಲೆಕ್ಟ್ರಿಕಲ್ ವಾಹನಗಳು ಸೂಕ್ತ ಎಂದು ಅಭಿಪ್ರಾಯಪಟ್ಟರು.