ಶಬರಿಮಲೆ ಯಾತ್ರಾರ್ಥಿಗಳಿಗೆ ವಿಮಾನಗಳ ಕ್ಯಾಬಿನ್ ಬ್ಯಾಗ್‌ನಲ್ಲಿ `ಇರುಮುಡಿ’ ಸಾಗಿಸಲು ಅನುಮತಿ

Public TV
2 Min Read
Sabarimala Temple

ತಿರುವನಂತಪುರಂ: ಕೇರಳದ ಶಬರಿಮಲೆ ದೇವಸ್ಥಾನಕ್ಕೆ (Sabarimala temple) ತೆರಳುವ ಯಾತ್ರಾರ್ಥಿಗಳು ವಿಮಾನಗಳ ಕ್ಯಾಬಿನ್ ಬ್ಯಾಗ್‌ನಲ್ಲಿ `ಇರುಮುಡಿ’ಯನ್ನು ಸಾಗಿಸಬಹುದು ಎಂದು ನಾಗರಿಕ ವಿಮಾನಯಾನ ಸಚಿವ ಕೆ.ರಾಮಮೋಹನ್ ನಾಯ್ಡು (K Rammohan Naidu) ತಿಳಿಸಿದರು.

ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಶನಿವಾರ ಮಾಹಿತಿ ಹಂಚಿಕೊಂಡ ಅವರು, ನವೆಂಬರ್ ಮಧ್ಯದಿಂದ ಜನವರಿಯ ಕೊನೆಯವರೆಗೆ ಶಬರಿಮಲೆಗೆ ಯಾತ್ರಾರ್ಥಿಗಳು ತೆರಳುತ್ತಾರೆ. 2025ರ ಜನವರಿ 20ರವರೆಗೆ ಯತಾರ್ಥಿಗಳು ವಿಮಾನಗಳ ಕ್ಯಾಬಿನ್ ಬ್ಯಾಗ್‌ನಲ್ಲಿ ತೆಂಗಿನಕಾಯಿಯನ್ನು ತೆಗೆದುಕೊಂಡು ಪ್ರಯಾಣಿಸಬಹುದು ಹಾಗೂ ಈ ಸೀಮಿತ ಅವಧಿಯಲ್ಲಿ ಮಾತ್ರ ತೆಗೆದುಕೊಂಡು ಹೋಗಲು ಅನುಮತಿಸಲಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ಅನ್ನಕ್ಕೆ ಆರ್ಸೆನಿಕ್ ಎಂಬ ವಿಷ ಬೆರೆಸಿ ಕೊಲೆಗೆ ಯತ್ನ? – ಎಫ್‌ಎಸ್‌ಎಲ್ ವರದಿಗಾಗಿ ಕಾಯುತ್ತಿರೋ ಪೊಲೀಸರು

ಸದ್ಯದ ನಿಯಮಗಳ ಪ್ರಕಾರ ವಿಮಾನಗಳ ಕ್ಯಾಬಿನ್ ಬ್ಯಾಗ್‌ನಲ್ಲಿ ತೆಂಗಿನಕಾಯಿ ತೆಗೆದುಕೊಂಡು ಹೋಗಲು ಅನುಮತಿಯಿಲ್ಲ. ಶಬರಿಮಲೆಗೆ ಹೋಗುವವರಿಗೆ ಯಾತ್ರೆ ಸುಲಭವಾಗಿರಲಿ ಎನ್ನುವ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಮಂಡಲಂ-ಮಕರವಿಳಕ್ಕು ತೀರ್ಥಯಾತ್ರೆಯ ಅವಧಿಯಲ್ಲಿ `ಇರುಮುಡಿ’ಯಲ್ಲಿ (ತುಪ್ಪ ತುಂಬಿದ ತೆಂಗಿನಕಾಯಿ ಸೇರಿದಂತೆ ಅರ್ಪಣೆಗಳನ್ನು ಹೊಂದಿರುವ ಪವಿತ್ರ) ತೆಂಗಿನಕಾಯಿಯನ್ನು ಸಾಗಿಸಲು ವಿನಾಯಿತಿ ನೀಡಲಾಗಿದೆ ಎಂದು ಹೇಳಿದರು.

ಈ ಆದೇಶವು 2025ರ ಜನವರಿ 20ರವರೆಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಅಗತ್ಯವಿರುವ ಎಕ್ಸ್-ರೇ, ಇಟಿಡಿ (ಎಕ್ಸ್ಪ್ಲೋಸಿವ್ ಟ್ರೇಸ್ ಡಿಟೆಕ್ಟರ್) ಮತ್ತು ಭೌತಿಕ ತಪಾಸಣೆ ಹೀಗೆ ಭದ್ರತಾ ತಪಾಸಣೆಗಳ ಬಳಿಕವೇ ಅನುಮತಿ ನೀಡಲಾಗುವುದು ಎಂದರು.

ಒಟ್ಟು ಎರಡು ತಿಂಗಳ ಕಾಲ ಅಂದರೆ ಜನವರಿ ಅಂತ್ಯದವರೆಗೆ ತೀರ್ಥಯಾತ್ರೆಗಾಗಿ ಶಬರಿಮಲೆಯ ಅಯ್ಯಪ್ಪ ದೇವಾಲಯವು ತೆರೆದಿರುತ್ತದೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ದೇಗುಲಕ್ಕೆ ಭೇಟಿ ನೀಡುತ್ತಾರೆ. ಜೊತೆಗೆ `ಇರುಮುಡಿ ಕೆಟ್ಟು’ (ತುಪ್ಪ ತುಂಬಿದ ತೆಂಗಿನಕಾಯಿ ಸೇರಿದಂತೆ ಅರ್ಪಣೆಗಳನ್ನು ಹೊಂದಿರುವ ಪವಿತ್ರ ಚೀಲವನ್ನು ಭಗವಂತನಿಗೆ ಕೊಂಡೊಯ್ಯತ್ತಾರೆ).

ಸಾಮಾನ್ಯವಾಗಿ, ಶಬರಿಮಲೆಗೆ ಯಾತ್ರೆ ಕೈಗೊಳ್ಳುವವರು `ಕೆಟ್ಟುನಿರಕಲ್’ ಆಚರಣೆಯ ಭಾಗವಾಗಿ `ಇರುಮುಡಿ ಕೆಟ್ಟು’ ಸಿದ್ಧಪಡಿಸುತ್ತಾರೆ. ಆಚರಣೆಯ ಸಮಯದಲ್ಲಿ, ತೆಂಗಿನಕಾಯಿಯೊಳಗೆ ತುಪ್ಪ ತುಂಬಿಸಲಾಗುತ್ತದೆ. ನಂತರ ಅದನ್ನು ಇತರ ನೈವೇದ್ಯಗಳೊಂದಿಗೆ ಚೀಲದಲ್ಲಿ ಇರಿಸಲಾಗುತ್ತದೆ. ತೀರ್ಥಯಾತ್ರೆಯ ಸಮಯದಲ್ಲಿ ವಿವಿಧ ಪವಿತ್ರ ಸ್ಥಳಗಳಲ್ಲಿ ಒಡೆಯಲು ಹೆಚ್ಚಿನ ತೆಂಗಿನಕಾಯಿಗಳನ್ನು ಇರಿಸಿರಲಾಗುತ್ತದೆ.

`ಇರುಮುಡಿ ಕಟ್ಟೆ’ಯನ್ನು ತಲೆಯ ಮೇಲೆ ಹೊತ್ತ ಯಾತ್ರಾರ್ಥಿಗಳಿಗೆ ಮಾತ್ರ ದೇವಾಲಯದ ಗರ್ಭಗುಡಿಯನ್ನು ತಲುಪಲು 18 ಪವಿತ್ರ ಮೆಟ್ಟಿಲುಗಳನ್ನು ಹತ್ತಲು ಅನುಮತಿಸಲಾಗುತ್ತದೆ. ಅದನ್ನು ಹೊತ್ತುಕೊಳ್ಳದವರು ಗರ್ಭಗುಡಿಯನ್ನು ತಲುಪಲು ಬೇರೆ ಮಾರ್ಗದ ಮೂಲಕ ಗರ್ಭಗುಡಿಗೆ ಹೋಗಬೇಕು.ಇದನ್ನೂ ಓದಿ: ಶಕ್ತಿ ಯೋಜನೆಯಲ್ಲೂ ದೋಖಾ? – ಮಹಿಳೆಯರ ಫ್ರೀ ಬಸ್ ಪ್ರಯಾಣ ಟಿಕೆಟ್ ಪುರುಷರಿಗೆ ವಿತರಣೆ

Share This Article