ವೃಕ್ಷಮಾತೆ ಸಾಲು ಮರದ ತಿಮ್ಮಕ್ಕಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ

Public TV
2 Min Read
saalu marada thimmakka 1

ನವದೆಹಲಿ: ಪರಿಸರ ಸಂರಕ್ಷಣೆಗೆ ನೀಡಿರುವ ಕೊಡುಗೆಗೆ ಮಾನ್ಯತೆ ನೀಡಿ, ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಇಂದು ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಅಲ್ಲದೆ ಟ್ವೀಟ್ ಮೂಲಕ ಸ್ವತಃ ರಾಷ್ಟ್ರಪತಿಗಳೇ ವೃಕ್ಷಮಾತೆಗೆ ಅಭಿನಂದನೆ ತಿಳಿಸಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್, ಪರ್ವತಾರೋಹಿ ಬಚೇಂದ್ರಿ ಪಾಲ್, ಜಾನಪದ ಗಾಯಕಿ ತೀಜನ್ ಬಾಯಿ, ಪರಿಸರಪ್ರೇಮಿ, ಕರ್ನಾಟಕದ ಸಾಲು ಮರದ ತಿಮ್ಮಕ್ಕ ಸೇರಿದಂತೆ 54 ಗಣ್ಯರಿಗೆ 2019ನೇ ಸಾಲಿನ ಪದ್ಮ ಪುರಸ್ಕಾರಗಳನ್ನು ಪ್ರಧಾನ ಮಾಡಿದ್ದಾರೆ. ಈ ಹಿಂದೆ ಮಾರ್ಚ್ 11ರಂದು ವಿವಿಧ ಕ್ಷೇತ್ರದಲ್ಲಿ ಸಾಧಿಸಿದ 56 ಗಣ್ಯರಿಗೆ ಪದ್ಮ ಪ್ರಶಸ್ತಿ ನೀಡಿ ರಾಷ್ಟ್ರಪತಿಗಳು ಗೌರವಿಸಿದ್ದರು. ಇದನ್ನೂ ಓದಿ: ದಿಗ್ಗಜರಿಗೆ ರಾಷ್ಟ್ರಪತಿಗಳಿಂದ ಪದ್ಮ ಗೌರವ ಪ್ರದಾನ

Saalumarada Thimmakka

ಟ್ವೀಟ್‍ನಲ್ಲಿ ಏನಿದೆ?
ಸಮಾಜ ಸೇವೆ ಮಾಡಿದಂತಹ ಶ್ರೀಮತಿ ಸಾಲುಮರದ ತಿಮ್ಮಕ್ಕರವರಿಗೆ ರಾಷ್ಟ್ರಪತಿ ಪದ್ಮಶ್ರೀ ಪುರಸ್ಕಾರವನ್ನು ಪ್ರದಾನ ಮಾಡಿದ್ದಾರೆ. 107 ನೇ ವಯಸ್ಸಿನ ಕರ್ನಾಟಕದ ಶ್ರೀಮತಿ ತಿಮ್ಮಕ್ಕರವರು ಒಬ್ಬ ಪರಿಸರವಾದಿ ಹಾಗೂ ತನ್ನ ಹಳ್ಳಿಯಾದ ಹುಲಿಕಲ್‍ನಿಂದ ಕುದೂರುವರೆಗಿನ 4 ಕಿ.ಮೀ ಹೆದ್ದಾರಿಯ ಉದ್ದಗಲಕ್ಕೂ ಆಲದ ಮರಗಳನ್ನು ನೆಟ್ಟು ಹೆಸರುವಾಸಿಯಾಗಿದ್ದಾರೆ.

ಪರಿಸರದ ಮೇಲೆ ತಮಗಿರುವ ಪ್ರೀತಿಯಿಂದ ರಸ್ತೆ ಬದಿಗಳಲ್ಲಿ ಮರಗಳನ್ನು ನೆಟ್ಟು, ಅವುಗಳನ್ನು ಮಕ್ಕಳಂತೆ ನೀರುಣಿಸಿ ಪೋಷಿಸಿ ತಿಮ್ಮಕ್ಕನವರು ವೃಕ್ಷಮಾತೆಯಾದವರು. ಸಾಲುಮರದ ತಿಮ್ಮಕ್ಕ ಮೂಲಕ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನವರು. ಮಕ್ಕಳು ಇಲ್ಲವೆನ್ನುವ ಕಾರಣಕ್ಕೆ ರಸ್ತೆ ಬದಿಯ ಆಲದ ಮರಗಳನ್ನೇ ತಮ್ಮ ಮಕ್ಕಳೆಂದು ಭಾವಿಸಿ ಬೆಳೆಸಿ, ಪೋಷಿಸಿ ಪರಿಸರ ಉಳಿಸಿ ಎಂದು ಸಾರಿದ ವೃಕ್ಷಮಾತೆ. ಇದೇ ಕಾರಣಕ್ಕೆ ಅವರು ಸಾಲುಮರದ ತಿಮ್ಮಕ್ಕ ಎಂದು ಖ್ಯಾತಿ ಪಡೆದಿದ್ದಾರೆ.

ಸಾಲು ಮರದ ತಿಮ್ಮಕ್ಕನವರು ನೆಟ್ಟ ಮರಗಳೆಲ್ಲವೂ ಕುದೂರಿನಿಂದ ಹುಲಿಕಲ್‍ನ ರಾಜ್ಯ ಹೆದ್ದಾರಿಯಲ್ಲಿ ಇಂದಿಗೂ ಇವೆ. ಈಗ ಇವುಗಳನ್ನು ಬೆಳೆಸುವ ಜವಾಬ್ದಾರಿಯನ್ನು ಕರ್ನಾಟಕ ಸರ್ಕಾರ ವಹಿಸಿಕೊಂಡಿದೆ. ಆದ್ರೆ ಇಳಿಯ ವಯಸಿನಲ್ಲೂ ತಿಮ್ಮಕ್ಕ ಅವರು ಮಾತ್ರ ಪರಿಸರ ರಕ್ಷಣೆ, ಕಾಳಜಿಯನ್ನು ಮರೆತಿಲ್ಲ. ಸ್ವಾರ್ಥವಿಲ್ಲದೆ ಪರಿಸರಕ್ಕಾಗಿ ಸೇವೆ ಸಲ್ಲಿಸಿದ ತಿಮ್ಮಕ್ಕ ಅವರ ಕಾರ್ಯವನ್ನು ಮೆಚ್ಚಿ ಈಗಾಗಲೇ ಹಲವು ರಾಷ್ಟ್ರಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿಗಳು ಲಭಿಸಿದೆ. ಬಿಬಿಸಿ 2016 ರಲ್ಲಿ ಜಗತ್ತಿನ ಅತಿ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಕೂಡ ಸಾಲು ಮರದ ತಿಮ್ಮಕ್ಕ ಅವರು ಸ್ಥಾನ ಪಡೆದಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *