ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ, ಶಾಸಕ ಎಸ್.ಆರ್.ವಿಶ್ವನಾಥ್ ಸಹಿಯನ್ನು ಫೋರ್ಜರಿ ಮಾಡಿ ಓರ್ವ ಅಧಿಕಾರಿ ಸಿಕ್ಕಿಬಿದ್ದಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ಬಿ.ಕೆ.ಚಂದ್ರಕಾಂತ್ ಸಿಕ್ಕಿಬಿದ್ದ ಅಧಿಕಾರಿ. ಚಂದ್ರಕಾಂತ್ ತಮ್ಮ ವರ್ಗಾವಣೆಗಾಗಿ ಈ ರೀತಿ ಮಾಡಿದ್ದಾರೆ. ಎಸ್.ಆರ್.ವಿಶ್ವನಾಥ್ ಅವರ ಹೆಸರಿನ ಲೆಟರ್ ಹೆಡ್ ಬಳಸಿ ಸಿಎಂ ಶಿಫಾರಸು ಪತ್ರವನ್ನು ಚಂದ್ರಕಾಂತ್ ತಲುಪಿಸಿದ್ದರು ಎಂಬ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.
ಬೆಂಗಳೂರು ನಗರ ಜಿಲ್ಲಾ ಪಂಚಾಯತ್ ಸಹಾಯಕ ಯೋಜನಾ ಅಧಿಕಾರಿ ವಿಠಲ್ ಕಾವಳೆ ಜಾಗಕ್ಕೆ ತಮ್ಮನ್ನು ವರ್ಗಾಯಿಸುವಂತೆ ಚಂದ್ರಕಾಂತ್ ಮನವಿ ಮಾಡಿದ್ದರು. ನಕಲಿ ಶಿಫಾರಸು ಪತ್ರಕ್ಕೆ ಸಹಿ ಮಾಡಿ ಸಿಎಂ ಕೂಡ ವರ್ಗಾವಣೆ ಆದೇಶ ಹೊರಡಿಸಿದ್ದರು. ಇದೀಗ ಫೋರ್ಜರಿ ಪ್ರಕರಣ ಬಯಲಾಗಿದ್ದು, ಆರೋಪಿ ಚಂದ್ರಕಾಂತ್ ವಿರುದ್ಧ ಪೊಲೀಸ್ ದೂರು ಕೊಡಲು ಎಸ್.ಆರ್.ವಿಶ್ವನಾಥ್ ಮುಂದಾಗಿದ್ದಾರೆ.
ಪತ್ರದಲ್ಲಿ ಏನಿದೆ?
ಚಂದ್ರಕಾಂತ್ ಬಿ.ಕೆ. ಸಹಾಯಕ ಕಾರ್ಯದರ್ಶಿಯಾಗಿ ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ನನಗೆ ಪರಿಚಿತರಿರುತ್ತಾರೆ. ಇವರು ವಯೋವೃದ್ಧ ತಂದೆ-ತಾಯಿಯ ಆರೋಗ್ಯದ ಕಡೆ ಗಮನಿಸಬೇಕಾದ ಕಾರಣ ಅವರನ್ನು ಬೆಂಗಳೂರು ನಗರ ಜಿಲ್ಲಾ ಪಂಚಾಯತಿಯಲ್ಲಿ ಸಹಾಯಕ ಯೋಜನಾ ಅಧಿಕಾರಿ-1 ಆಗಿ ಕಾರ್ಯನಿರ್ವಹಿಸುತ್ತಿರವ ವಿಠಲ್ ಕಾವಳೆ ಜಾಗಕ್ಕೆ ತಮ್ಮನ್ನು ವರ್ಗಾಯಿಸುವಂತೆ ಸೂಕ್ತ ಆದೇಶ ನೀಡಬೇಕು ಎಂದು ಕೋರುತ್ತೇನೆ.
ಪತ್ರದ ಕೆಳಗೆ ತಮ್ಮ ವಿಶ್ವಾಸಿ ಎಸ್.ಆರ್.ವಿಶ್ವನಾಥ್ ಎಂದು ಬರೆದು ಅವರ ಸಹಿಯನ್ನು ಫೋರ್ಜರಿ ಮಾಡಿದ್ದಾರೆ. ಈ ಪತ್ರವನ್ನು ಚಂದ್ರಕಾಂತ್ ಬಿ.ಕೆ. ಸೆಪ್ಟೆಂಬರ್ 18ರಂದು ಸಿಎಂ ಯಡಿಯೂರಪ್ಪ ಅವರಿಗೆ ನೀಡಿದ್ದರು. ಇದಕ್ಕೆ ಸಿಎಂ ಅಕ್ಟೋಬರ್ 9ರಂದು ಸಹಿ ಮಾಡಿದ್ದರು.