– ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ
ಮಡಿಕೇರಿ: ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ಸಲಹೆ, ಸೂಚನೆಯಲ್ಲಿ ಸತ್ಯಾಂಶವಿದ್ದರೆ ಅದನ್ನು ಸರಿಪಡಿಸಿಕೊಳ್ಳುತ್ತೇನೆ ಎಂದು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಹೇಳಿದ್ದಾರೆ.
ಕೆ.ಆರ್.ನಗರ ಪುರಸಭೆ ಚುನಾವಣೆ ಸೋಲಿಗೆ ಸಾ.ರಾ.ಮಹೇಶ್ ಅವರ ನಡೆಯೇ ಕಾರಣ ಎಂಬ ಎಚ್.ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಅವರು 40 ವರ್ಷಗಳಿಂದ ರಾಜಕಾರಣದಲ್ಲಿದ್ದವರು, ಅನುಭವದ ಮೇಲೆ ಹೇಳಿದ್ದಾರೆ. ನನಗೆ ಈಗ 20 ವರ್ಷದ ಅನುಭವ ಇದೆ ಅಷ್ಟೇ. ನಮ್ಮಂತವರಿಗೆ ಸಲಹೆ ಕೊಡುವ ಸಂಪೂರ್ಣ ಹಕ್ಕು ಅವರಿಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಜೆಡಿಎಸ್‍ನಲ್ಲಿ ಹಣವೇ ಮುಖ್ಯ, ದುರಹಂಕಾರದಿಂದ್ಲೇ ಸೋಲು: ದಳ ನಾಯಕರಿಗೆ ವಿಶ್ವನಾಥ್ ಪರೋಕ್ಷ ಗುದ್ದು
Advertisement
Advertisement
ಜೆಡಿಎಸ್ ಎಲ್ಲರನ್ನೂ ಪ್ರೀತಿ ವಿಶ್ವಾಸದಿಂದ ಕಾಣುವ ಪಕ್ಷ. ನಾನು ಯಾವುದೇ ದ್ವೇಷ ರಾಜಕಾರಣ ಮಾಡಿಲ್ಲ. ವಿಶ್ವನಾಥ್ ಅವರೇ ನಮ್ಮ ರಾಜ್ಯಾಧ್ಯಕ್ಷರು ಎಂದು ಒಪ್ಪಿಕೊಂಡ ಮೇಲೆ, ಅವರ ಸಲಹೆ ಒಪ್ಪಿಕೊಳ್ಳುವುದರಲ್ಲಿ ಏನಿದೆ? ಪಕ್ಷ ಸಂಘಟನೆ ಉದ್ದೇಶದಿಂದ ಸಲಹೆ ನೀಡಿದ್ದಾರೆ ಎಂದು ಪರೋಕ್ಷವಾಗಿ ತಿರುಗೇಟು ನೀಡಿದರು.
Advertisement
ಕೆ.ಆರ್ ನಗರ ವಿಧಾನಸಭಾ ಕ್ಷೇತ್ರದ ಮತದಾರರು 1,840 ಮತಗಳಿಂದ ನನ್ನನ್ನು ಈ ಬಾರಿ ಗೆಲ್ಲಿಸಿದ್ದಾರೆ. ಕಳೆದ ಮೂರು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದೇನೆ. ನಾನು ಯಾವುದನ್ನೂ ಮರೆತಿಲ್ಲ. ಹೀಗಾಗಿ ಸೀಗೋಡಿನಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದೇನೆ. ಇಂದು ಮಡಿಕೇರಿಗೆ ಭೇಟಿ ನೀಡಿ ಮನೆ ನಿರ್ಮಾಣ ಕಾರ್ಯ ವೀಕ್ಷಣೆ ಮಾಡುತ್ತಿದ್ದೇನೆ ಎಂದು ಪರೋಕ್ಷವಾಗಿ ವಿಶ್ವನಾಥ್ ಅವರಿಗೆ ಟಾಂಗ್ ಕೊಟ್ಟರು.
Advertisement
ಈ ಬಾರಿಯ ಕೆ.ಆರ್ ನಗರ ಪುರಸಭೆ ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ. 2018ರ ಚುನಾವಣೆಯಲ್ಲಿ ಕೆ.ಆರ್ ನಗರ ವಿಧಾನಸಭಾ ಕ್ಷೇತ್ರದ ಟೌನ್‍ನಲ್ಲಿ 2,000 ಮತಗಳ ವ್ಯತ್ಯಾಸ ಬಂದಿತ್ತು. ಈ ಬಾರಿಯ ಚುನಾವಣೆಯಲ್ಲಿ 516 ಮತಗಳು ಮಾತ್ರ ವ್ಯತ್ಯಾಸವಾಗಿದೆ. ಅದನ್ನು ಹೇಗೆ ಸರಿ ಮಾಡಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಎಚ್.ವಿಶ್ವನಾಥ್ ಅವರ ಸಲಹೆ ಸ್ವೀಕರಿಸಿ, ಸರಿ ಮಾಡಿಕೊಳ್ಳುತ್ತೇನೆ ಎಂದರು.