ಬೆಂಗಳೂರು: ಸ್ಯಾಂಡಲ್‍ವುಡ್ ಹಿರಿಯ ನಟ ಸತ್ಯಜಿತ್ ವಿಧಿವಶರಾಗಿದ್ದಾರೆ. ಸದ್ಯ ಸತ್ಯಜಿತ್ ನಿಧನಕ್ಕೆ ನಟ, ನಿರ್ದೇಶಕ ಎಸ್. ನಾರಾಯಣ್ ಕಂಬನಿ ಮಿಡಿದಿದ್ದಾರೆ.
ಸತ್ಯಜಿತ್ ಜೊತೆ ಕಳೆದ ಕೆಲವು ದಿನಗಳ ಕುರಿತಂತೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಎಸ್. ನಾರಾಯಣ್ ಅವರು, ಬದುಕಿರುವವರಿಗೆ ನೋವು ಕೊಡುವುದೇ ಪ್ರತಿ ಸಾವು. ನಾನು ಸಹ ನಿರ್ದೇಶಕನಾಗಿದ್ದಗಿಂದಲೂ ಸತ್ಯಜಿತ್ ಅವರು ನನಗೆ ಪರಿಚಯ. ನಿರ್ಮಾಪಕ ರಘು ವೀರ್ ನಿರ್ಮಿಸಿ, ಎ.ಟಿ ರಘು ಅವರು ನಿರ್ದೇಶಿಸಿದ್ದ ಅಜಯ್ ವಿಜಯ್ ಸಿನಿಮಾಕ್ಕೆ ನಾನು ಸಹ ನಿರ್ದೇಶಕನಾಗಿ ಕೆಲಸ ಮಾಡುತ್ತಿದ್ದೆ. ಈ ವೇಳೆ ಸತ್ಯಜಿತ್ ಬಸ್ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲಸ ಮುಗಿಸಿದ ಕೂಡಲೇ ನೇರವಾಗಿ ಶೂಟಿಂಗ್ ಸೆಟ್‍ಗೆ ಆಗಮಿಸುತ್ತಿದ್ದರು. ಬೆಳಗ್ಗೆ 6 ಗಂಟೆ ಅಥವಾ 7 ಗಂಟೆಗೆ ಶೂಟಿಂಗ್ ಎಂದ ಕೂಡಲೇ ಬಹಳ ಪ್ರಾಮಾಣಿಕವಾಗಿ ಸಮಯಕ್ಕೆ ಸರಿಯಾಗಿ ಹಾಜರಾಗುತ್ತಿದ್ದರು. ಇದನ್ನೂ ಓದಿ: ಸ್ಯಾಂಡಲ್‍ವುಡ್ ಹಿರಿಯ ನಟ ಸತ್ಯಜಿತ್ ಇನ್ನಿಲ್ಲ
ಸತ್ಯಜಿತ್ ಅವರು ಎಂದೂ ಕೂಡ ಐಷಾರಾಮಿ ಜೀವನವನ್ನು ಬಯಸಿದವರಲ್ಲ. ಅವರೊಬ್ಬ ಅಪ್ರತಿಮ ಪ್ರತಿಭಾವಂತ ನಟ. ಸೈಯದ್ ಎಂಬ ಹೆಸರನ್ನು ಪಕ್ಕಕ್ಕೆ ತೆಗೆದು ಇಟ್ಟರೆ, ಅವರು ನಡೆದುಕೊಳ್ಳುವ ರೀತಿ ಹಾಗೂ ಸ್ವಭಾವದಲ್ಲಿ ಅವರು ಮುಸ್ಲಿಂ ಎಂಬುವುದು ಗೊತ್ತೆ ಆಗುವುದಿಲ್ಲ ಎಂದಿದ್ದಾರೆ.
ಪ್ರಾಣ್ ಎಂಬ ಹಿಂದಿ ಕಲಾವಿದ ಎಂದರೆ ಸತ್ಯಜಿತ್ ಅವರಿಗೆ ಬಹಳ ಇಷ್ಟ. ಅವರಿಂದ ಸ್ಫೂರ್ತಿ ಪಡೆದು ಸತ್ಯಜಿತ್ ಅವರು ಸಿನಿಮಾದಲ್ಲಿ ಅಭಿನಯಿಸುತ್ತಿದ್ದರು. ನನ್ನ ಮೊದಲ ಸಿನಿಮಾ ಚೈತ್ರದ ಪ್ರೇಮಾಂಜಲಿಯಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಆಗ ನಾನು ಇನ್ನೂ ಚಿಕ್ಕ ಹುಡುಗನಾಗಿದ್ದೆ. ಆಗಲೇ ಇವರು ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದರು. ನಾನೊಬ್ಬ ಹಿರಿಯ ಕಲಾವಿದ ಈತ ಹೊಸ ನಿರ್ದೇಶಕ ಎಂದು ಕೂಡ ಪರಿಗಣಿಸದೇ ನನಗೆ ಈ ಸಿನಿಮಾ ಖಂಡಿತ ಚೆನ್ನಾಗಿ ಓಡುತ್ತದೆ ಮಾಡಿ ಎಂದು ಪ್ರೋತ್ಸಾಹ ನೀಡುತ್ತಿದ್ದರು.
ಇದೀಗ ಬೆಳಗ್ಗೆ ಸತ್ಯಜಿತ್ ಅವರ ಅಗಲಿರುವ ವಿಚಾರ ತಿಳಿದು ನನಗೆ ಬಹಳ ಬೇಸರವಾಯಿತು. ಕಲಾವಿದರೂ ಒಬ್ಬೊಬ್ಬರೆ ಸಾವನ್ನಪ್ಪುತ್ತಿರುವ ವಿಚಾರ ಕೇಳಿದಾಗ ನಮ್ಮ ಉದ್ಯಮದಲ್ಲಿ ಸಂಪತ್ತುಗಳು ಕೊರತೆಯಾಗುತ್ತಿದೆ ಅನಿಸುತ್ತದೆ. ನಾವು ನಿರ್ದೇಶಕರು ಕಲಾವಿದರಿದ್ದರೆನೇ ಸಿನಿಮಾಗಳನ್ನು ತೆರೆಯಲು ಸಾಧ್ಯ. ಒಬ್ಬೊಬ್ಬರನ್ನು ಕಳೆದುಕೊಳ್ಳುತ್ತಿದ್ದಾಗಲೂ ಒಂದೊಂದೇ ಮರದ ರೆಂಬೆಗಳು ಮುರಿದು ಹೋಗುತ್ತಿದೆ ಎಂಬ ಭಾವನೆಯುಂಟಾಗುತ್ತದೆ ಎಂದಿ ಹೇಳಿದ್ದಾರೆ. ಇದನ್ನೂ ಓದಿ: ಹಿರಿಯ ನಟ ಸತ್ಯಜಿತ್ ನಿಧನ – ದುಃಖ ತೋಡಿಕೊಂಡ ಪುತ್ರ
ಒಂದು ವರ್ಷದ ಹಿಂದೆ ನಾನು ಅಚಾನಕ್ ಆಗಿ ಸತ್ಯಜಿತ್ ಅವರನ್ನು ಭೇಟಿ ಮಾಡಿದ್ದೆ. ಆಗ ಅವರು ಕಾಲನ್ನು ಕಳೆದುಕೊಂಡಿದ್ದರು. ಅದನ್ನು ಕಂಡು ನನ್ನ ಮನಸ್ಸಿಗೆ ಬಹಳ ದುಃಖವಾಯಿತು. ಈ ವೇಳೆ ಸತ್ಯಜಿತ್ ಅವರು ನಾವು ಬರುವಾಗ ಏನೇನು ಪಡೆದುಕೊಂಡು ಬರುತ್ತೀವಿ ಎಂಬುವುದು ನಮಗೆ ತಿಳಿದಿರುವುದಿಲ್ಲ. ನಮ್ಮ ಜೀವನದ ಪಯಣದಲ್ಲಿ ಎಲ್ಲವೂ ಎದುರಾಗುತ್ತದೆ. ಆಗ ನಮ್ಮ ಕರ್ಮದ ಅರಿವಾಗುತ್ತದೆ. ಆದರೆ ನಮ್ಮಿಂದ ಬಹಳಷ್ಟು ಜನರು ಪಾಠ ಕಲಿಯಬೇಕು ಅಂತ ಹೇಳಿದ್ದರು. ಈ ಮಾತನ್ನು ಹೇಳಿದ ಕಾರಣ ಏನು ಎಂದು ನನಗೆ ತಿಳಿದಿಲ್ಲ. ನನ್ನ ಬದುಕು ತುಂಬಾ ಜನರಿಗೆ ಉದಾಹರಣೆಯಾಗುತ್ತದೆ. ನನ್ನ ಬದುಕು ಇಂದು ಬೀದಿಯಲ್ಲಿದೆ ಎಂದಿದ್ದರು ಎಂದು ತಿಳಿಸಿದ್ದಾರೆ.