ನವದೆಹಲಿ: ಯುದ್ಧಪೀಡಿತ ಉಕ್ರೇನ್ ನೆಲದಿಂದ ಭಾರತಕ್ಕೆ ವಾಪಸ್ಸಾದ ವಿದ್ಯಾರ್ಥಿಗಳು ಕೇಂದ್ರ ಸರ್ಕಾರದ ಸ್ಪಂದನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶೇಷ ವಿಮಾನಗಳ ಮೂಲಕ ಭಾರತ ತಲುಪಿದ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ಕೊಟ್ಟು ಸ್ವಾಗತ ಮಾಡುತ್ತಿರುವ ಕ್ರಮಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬಿಹಾರ್ ಮೂಲದ ದಿವ್ಯಂಶು ಸಿಂಗ್, ಉಕ್ರೇನ್‌ನಿಂದ ಹಂಗೇರಿ ಗಡಿ ತಲುಪಿ ಅಲ್ಲಿಂದ ವಿಶೇಷ ವಿಮಾನದ ಮೂಲಕ ಭಾರತದ ದೆಹಲಿಗೆ ಮರಳಿದ್ದಾರೆ. ಈ ವೇಳೆ ಗುಲಾಬಿ ಹೂ ಕೊಟ್ಟು ಎಲ್ಲಾ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಇದನ್ನೂ ಓದಿ: ಯುದ್ಧದ ನಡುವೆ ಬಾಂಬ್ ಶೆಲ್ಟರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ
ಈ ವೇಳೆ ಮಾತನಾಡಿದ ದಿವ್ಯಂಶು ಸಿಂಗ್, ಯುದ್ಧ ಭೀಕರ ಸ್ಥಳ ಉಕ್ರೇನ್‌ನಿಂದ ಪಾರಾಗಿ ಹಂಗೇರಿ ಗಡಿ ತಲುಪಿದ ಬಳಿಕ ನಮಗೆ ಭಾರತ ಸರ್ಕಾರ ಸಹಾಯ ಮಾಡಿದೆ. ಉಕ್ರೇನ್‌ನಲ್ಲಿ ಸಿಲುಕಿದ್ದಾಗ ಯಾವುದೇ ಸಹಾಯ ಸಿಗಲಿಲ್ಲ. ಹಂಗೇರಿ ತಲುಪಲು ನಾಮಗೆ ನಾವೇ ಶ್ರಮವಹಿಸಿದ್ದೇವೆ. ನಾವು 10 ಮಂದಿ ಗುಂಪು ಕಟ್ಟಿಕೊಂಡು ದಟ್ಟಣೆಯಿದ್ದ ರೈಲಿನಲ್ಲಿ ಹೇಗೋ ಪ್ರಯಾಣ ಮಾಡಿದೆವು ಎಂದು ತಮ್ಮ ಕಷ್ಟದ ಪರಿಸ್ಥಿತಿ ಕುರಿತು ಮಾತನಾಡಿದ್ದಾರೆ.
ಭಾರತದ ವಿದ್ಯಾರ್ಥಿಗಳ ಮೇಲೆ ಉಕ್ರೇನ್, ರಷ್ಯಾ ಸೈನಿಕರ ದೌರ್ಜನ್ಯ ಕುರಿತು ಪ್ರತಿಕ್ರಿಯಿಸಿ, ಸ್ಥಳೀಯ ಜನರು ನಮಗೆ ಸಹಾಯ ಮಾಡಿದರು. ನಮ್ಮೊಂದಿಗೆ ಯಾರು ಸಹ ಅನುಚಿತವಾಗಿ ವರ್ತಿಸಿಲ್ಲ. ಪೋಲ್ಯಾಂಡ್ ಗಡಿಯಲ್ಲಿ ಕೆಲ ವಿದ್ಯಾರ್ಥಿಗಳು ದೌರ್ಜನ್ಯಕ್ಕೆ ಒಳಗಾಗಿರುವುದು ಸತ್ಯ. ಅದಕ್ಕೆ ಭಾರತ ಸರ್ಕಾರವೇ ಹೊಣೆ. ಸೂಕ್ತ ಸಮಯಕ್ಕೆ ಸರ್ಕಾರ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದರೆ ನಾವು ಇಷ್ಟೆಲ್ಲಾ ಸಂಕಷ್ಟಗಳನ್ನು ಎದುರಿಸುವ ಪ್ರಮೇಯ ಬರುತ್ತಿರಲಿಲ್ಲ. ಉಕ್ರೇನ್ ಬಿಟ್ಟು ಬಿನ್ನಿ ಎಂದು ಸ್ಪಷ್ಟವಾಗಿ ಸೂಚನೆ ನೀಡಿದ ಮೊದಲ ರಾಷ್ಟ್ರ ಅಮೆರಿಕ ಎಂದು ವಿದ್ಯಾರ್ಥಿ ಸಿಂಗ್ ತಿಳಿಸಿದ್ದಾರೆ. ಇದನ್ನೂ ಓದಿ: ಜೀವಂತ ಇದ್ದವ್ರನ್ನೇ ತರೋದು ಕಷ್ಟವಿದ್ದು, ನವೀನ್ ಶವ ತರುವುದು ಇನ್ನೂ ಡಿಫಿಕಲ್ಟ್: ಬೆಲ್ಲದ್
ಈಗ ನಾವು ಭಾರತಕ್ಕೆ ಮರಳಿದ್ದೇವೆ. ನಮಗೆ ಗುಲಾಬಿ ಹೂ ನೀಡಿದ್ದಾರೆ. ಏನಿದರ ಅರ್ಥ? ಇದನ್ನು ಪಡೆದು ನಾವೇನು ಮಾಡಬೇಕು? ಅಲ್ಲಿ ನಮಗೆ ಏನಾದರು ಆಗಿದ್ದರೆ ನಮ್ಮ ಕುಟುಂಬದವರು ಏನು ಮಾಡುತ್ತಿದ್ದರು ಎಂದು ಕೇಂದ್ರ ಸರ್ಕಾರದ ವಿರುದ್ಧ ವಿದ್ಯಾರ್ಥಿ ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರ ಸಕಾಲದಲ್ಲಿ ಕ್ರಮಕೈಗೊಂಡಿದ್ದರೆ ಈಗ ಹೂವು ವಿತರಿಸುವ ಅಗತ್ಯವಿರಲಿಲ್ಲ. ಸಕಾಲಿಕ ಕ್ರಮವಿದ್ದರೆ ಇಂತಹ ಪ್ರದರ್ಶನಗಳ ಅಗತ್ಯವಿರುವುದಿಲ್ಲ ಎಂದು ಛೀಮಾರಿ ಹಾಕಿದ್ದಾರೆ. ಇದನ್ನೂ ಓದಿ: ಉಕ್ರೇನ್‍ನಲ್ಲಿ ನವೀನ್ ಸಾವು – ಬಿಜೆಪಿ ನಾಯಕರ ವಿರುದ್ಧ ಸ್ಟಾಲಿನ್ ಕಿಡಿ