ಬೆಂಗಳೂರು: ಮೋದಿ ಪ್ರಧಾನಿಯಾದಾಗಿನಿಂದ ದೇಶದ ಘನತೆ ಕಮ್ಮಿಯಾಗಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಷ್ಯಾ-ಉಕ್ರೇನ್ ಯುದ್ದದಲ್ಲಿ ಸಾವನ್ನಪ್ಪಿದ ಕನ್ನಡಿಗ ನವೀನ್ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂತಹ ಸಂಕಷ್ಟದ ಸಂದರ್ಭದಲ್ಲಿ ಪ್ರಧಾನಿಗಳು ವಿದ್ಯಾರ್ಥಿಗಳನ್ನು ಪ್ರೇರಪಿಸಬೇಕು. ಆದರೆ ಪ್ರಧಾನಿಗಳ ಮಾತು ಶೋಭೆ ತರುತ್ತದೇಯೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಷ್ಯಾದಲ್ಲಿ ಆನ್‍ಲೈನ್ ಮಾರಾಟ ಸ್ಥಗಿತಗೊಳಿಸಿದ ಆಪಲ್
ಪಿಯುಸಿಯಲ್ಲಿ ನವೀನ್ 94% ಮಾಕ್ರ್ಸ್ ತೆಗೆದುಕೊಂಡಿದ್ದರು. ಯಾರು 85-90% ತಗೋತಾರೆ ಅವರ ಜೀವನದ ಬೆಲೆ ಹೆಚ್ಚಾ? ಅಥವಾ ಯಾರು ಕಡಿಮೆ ಮಾಕ್ರ್ಸ್ ತಗೋತಾರೆ ಅವರ ಜೀವನದ ಬೆಲೆ ಕಡಿಮೆಯೇ ಎಂದು ಪ್ರಶ್ನಿಸಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಕಿಡಿ ಕಾರಿದರು.
ಇದು ಇಂಟೆಲಿಜೆನ್ಸ್ ವೈಫಲ್ಯ ಅಲ್ವಾ? ಉಕ್ರೇನ್‍ನಲ್ಲಿ ಇನ್ನೂ ಅದೇಷ್ಟೂ ವಿದ್ಯಾರ್ಥಿಗಳು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ನಮ್ಮ ರಾಜ್ಯ ಇನ್ನೂ ನಾಟಕವೇ ಮಾಡುತ್ತಿದೆ. ಉಕ್ರೇನ್‍ನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯನ್ನು ಈಗಾಗಲೇ ಕ್ಲೋಸ್ ಮಾಡಲಾಗಿದೆ. ಆದರೂ ಇಲ್ಲಿಂದ ಹೋದ ನಾಲ್ಕು ಮಂತ್ರಿಗಳು ಯಾರ ಹತ್ತಿರ ಮಾತಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಈಗಾಗಲೇ ಪಾಕಿಸ್ತಾನದವರಿಗೆ ಸುರಕ್ಷಿತ ಮಾರ್ಗ ಸಿಕ್ಕಿದೆ. ನಮ್ಮ ದೇಶಕ್ಕೆ ಯಾಕೆ ಸಿಕ್ಕಿಲ್ಲ. ಆತಂಕದಲ್ಲಿ ಮನೆಗೆ ಹೋಗಬೇಕು ಅಂತ ಇರುವ ವಿದ್ಯಾರ್ಥಿಗಳ ಮುಂದೆ ಉದ್ದುದ್ದ ಭಾಷಣ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಭಾರತ್‍ಪೇ ಎಂಡಿ ಸ್ಥಾನಕ್ಕೆ ಅಶ್ನೀರ್ ಗ್ರೋವರ್ ರಾಜೀನಾಮೆ
ಕೇಂದ್ರ ಸರ್ಕಾರವು ಯಾವುದೇ ಕ್ರಮ ಕೈಗೊಳ್ಳದೆ ಕೇವಲ ತಮಾಷೆ ನೋಡುತ್ತಿದೆ. ನಿಜವಾದ ನ್ಯಾಟೋ ಇಲ್ಲಿಯೇ ಇದೆ. ಕೇವಲ ವಿದ್ಯಾರ್ಥಿಗಳ ಲೆಕ್ಕ ಸಿಗುತ್ತಿದೆ. ಉಳಿದವರ ಕಥೆ ಏನು? ಕೇವಲ 10 ಜನ ವಿದ್ಯಾರ್ಥಿಗಳನ್ನು ಕರೆತಂದು ಬೆನ್ನು ಚಪ್ಪರಿಸಿಕೊಳ್ತಿದ್ದೀರಿ. ಸಾವಿರಾರು ಜನರನ್ನು ಅಲ್ಲಿಯೇ ಬಿಟ್ಟು ಬಂದಿದ್ದೀರಲ್ಲ ಅವರ ಕಥೆ ಏನು? ಹೀಗೆ ಮಾಡಿದರೆ ಭಾರತ ವಿಶ್ವ ಗುರು ಹೇಗೆ ಆಗುತ್ತದೆ. ಮೋದಿ ಬಂದಾಗಿನಿಂದ ದೇಶದ ಘನತೆ ಕಮ್ಮಿಯಾಗಿದೆ ಎಂದು ದೂರಿದರು.
ನೇಪಾಳವೂ ನಿಮ್ಮ ಮಾತು ಕೇಳಲ್ಲ ನೆನಪಿಡಿ, ಮುಂಚೆ ಅಕ್ಕ ಪಕ್ಕದ ದೇಶಗಳು ನಮ್ಮ ಜೊತೆಗೆ ಉತ್ತಮ ಭಾಂದವ್ಯ ಹೊಂದಿದ್ದವು. ಈಗ ಆ ದೇಶಗಳೆಲ್ಲ ಚೈನಾ ಜೊತೆಗೆ ಸೇರಿಕೊಳ್ಳುತ್ತಿವೆ ಎಂದರು.