ನವದೆಹಲಿ: ನಾವು ಭಾರತಕ್ಕೆ ಬರುತ್ತೇವೆ ಎಂಬ ಭರವಸೆಯನ್ನೇ ಕಳೆದುಕೊಂಡಿದ್ದೆವು. ಇದೀಗ ಭಾರತಕ್ಕೆ ಮರಳಿ ಬಂದು ಸತ್ತು ಬದುಕಿದಂತಹ ಅನುಭವವಾಗುತ್ತಿದೆ ಎಂದು ಉಕ್ರೇನ್‌ನಿಂದ ಮರಳಿ ಭಾರತಕ್ಕೆ ಬಂದ ವಿದ್ಯಾರ್ಥಿನಿ ರುಬಿನಾ ಹೇಳಿದ್ದಾರೆ.
ದೆಹಲಿಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಬಳಿಕ ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ರುಬಿನಾ, ನಾವು ಉಕ್ರೇನ್ ಗಡಿ ದಾಟಿ ಪೋಲೆಂಡ್ ತಲುಪಿದ ತಕ್ಷಣ ಭಾರತೀಯ ರಾಯಭಾರ ಕಚೇರಿಯವರು ನಮ್ಮನ್ನು ಕರೆದರು. ಆ ಸಂದರ್ಭದಲ್ಲಿ ನಾವು ಎಲ್ಲಾ ಮರೆತು ಬಿಟ್ಟೆವು. ತಾಯಿನೇ ಮಕ್ಕಳನ್ನು ಕರೆಯುತ್ತಿದ್ದಾಳೆ ಅನ್ನುವಂತಹ ಅನುಭವ ನನಗಾಯ್ತು ಎಂದು ರುಬಿನಾ ತಿಳಿಸಿದರು.
Advertisement
Advertisement
Advertisement
ಯುದ್ಧದ ಸ್ಥಿತಿಗತಿ ಬಗ್ಗೆ ವಿವರಿಸಿದ ರುಬಿನಾ ಯುದ್ಧ ಪ್ರಾರಂಭವಾದಾಗ ನಾವು 1 ವಾರಗಳ ಕಾಲ ಬಂಕರ್‌ನಲ್ಲಿ ಇರಬೇಕಾಯ್ತು. ಬಂಕರ್ ಒಳಗಡೆಯೇ ನಮಗೆ ಬಾಂಬಿಂಗ್ ಹಾಗೂ ಶೆಲ್ಲಿಂಗ್ ಶಬ್ಧಗಳು ಕೇಳಿ ಬರುತ್ತಿತ್ತು. ಮೊದಲ ಎರಡು ದಿನ ಅಷ್ಟೊಂದು ಕಷ್ಟ ಎನಿಸಲಿಲ್ಲ. ಆದರೆ ಬಳಿಕ ಊಟ, ನೀರಿಗೆ ಕೊರತೆಯಾಗುತ್ತಿದ್ದಂತೆ ಇಲ್ಲಿ ಜಾಸ್ತಿ ದಿನ ಉಳಿಯೋಕೆ ಸಾಧ್ಯವಿಲ್ಲ. ಊರಿಗೆ ಮರಳಲೇ ಬೇಕು ಎಂದು ಅನಿಸುತ್ತಿತ್ತು. ನಾಳೆ ನಮಗೆ ನೀರು, ಊಟ ಸಿಗುತ್ತೋ ಇಲ್ಲವೋ ಎಂಬ ಭಯದಲ್ಲಿ ನೀರನ್ನು ಕೂಡಾ ಬಹಳ ಯೋಚನೆ ಮಾಡಿ ಕುಡಿಯುತ್ತಿದ್ದೆವು ಎಂದರು. ಇದನ್ನೂ ಓದಿ: ಜೀವದ ಮೇಲೆ ಅಸೆ ಬಿಟ್ಟು, ಒಂದು ವಾರ ನಡೆದುಕೊಂಡು ಬಂದು ಉಕ್ರೇನ್ ದಾಟಿದೆ: ಸೀನ್ಯ
Advertisement
ನಾವು ಬಂಕರ್‌ನಲ್ಲಿದ್ದಾಗ 2-3 ಕಿ.ಮೀ ದೂರದಲ್ಲಿ ಬಾಂಬ್ ಬೀಳುತ್ತಿತ್ತು. ಆಗ ಭಾರೀ ಶಬ್ದ ಕೇಳಿಸುತ್ತಿತ್ತು, ಹೊಗೆ ಕಾಣಿಸಿಕೊಳ್ಳುತ್ತಿತ್ತು. ನಾವು ಟ್ರೇನ್ ಮೂಲಕ ಕೀವ್ ತಲುಪಿದಾಗಲೂ ಬಾಂಬ್ ಶಬ್ಧ ಕೇಳಿಸಿತು. ಆ ಸಂದರ್ಭ ನಾವು ಬದುಕುವುದಿಲ್ಲ ಅನ್ನಿಸಿತ್ತು. ಭಾರತೀಯರು ಉಕ್ರೇನ್‌ನಿಂದ ಹಿಂತಿರುಗಲಿಲ್ಲ ಎಂದು ಭಾರತದ ಸುದ್ಧಿ ಮಾಧ್ಯಮಗಳಲ್ಲಿ ಬರುತ್ತೀವಿ ಎಂದು ಒಂದು ಬಾರಿ ಅನ್ನಿಸಿತು. ಸದ್ಯ ನಾವೀಗ ಭಾರತೀಯ ರಾಯಭಾರ ಕಚೇರಿಯ ಸಹಾಯದಿಂದ ಸುರಕ್ಷಿತವಾಗಿ ಬಂದಿದ್ದೀವಿ ಎಂದರು.
ಉಕ್ರೇನ್ ಗಡಿ ದಾಟಿ ಪೋಲೆಂಡ್ ಬಂದ ತಕ್ಷಣ ಅಲ್ಲಿ ನಮ್ಮನ್ನು ಭಾರತದ ಅಧಿಕಾರಿಗಳು ಬರಮಾಡಿಕೊಂಡರು. ಆ ಸಂದರ್ಭ ನಮ್ಮ ದೇಶಕ್ಕೇ ಬಂದೆವೇನೋ ಎನಿಸಿತು. 3 ದಿನದಿಂದ ಊಟ ಮಾಡಿರಲಿಲ್ಲ. ಅವರು ಊಟ ಕೂಡಾ ನೀಡಿದ್ರು. ನಮಗೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿ ಇದೀಗ ದೆಹಲಿಯನ್ನು ತಲುಪಿಸಿದ್ದಾರೆ. ಇದನ್ನೂ ಓದಿ: ರಾಜವಂಶಗಳು ತಮ್ಮ ಸ್ವಾರ್ಥಕ್ಕೆ ಉಕ್ರೇನ್ ಸಮಸ್ಯೆಯನ್ನ ಬಳಸಿಕೊಳ್ಳುತ್ತೀವೆ: ಮೋದಿ ಕಿಡಿ
ಭಾರತ ಉಕ್ರೇನ್ ಪ್ರವೇಶಿಸಿ ವಿದ್ಯಾರ್ಥಿಗಳನ್ನು ರಕ್ಷಿಸುವ ಬದಲು ಗಡಿ ದೇಶಗಳಲ್ಲಿ ನಿಂತುಕೊಂಡು ನಾವಾಗೇ ಬರೋದನ್ನು ಕಾದು ಕುಳಿತಿತ್ತು. ಈ ಸಂದರ್ಭದಲ್ಲಿ ಭಾರತಕ್ಕೆ ಧೈರ್ಯ ಇಲ್ಲ ಎಂದು ಹಲವರು ಟೀಕೆ ಮಾಡಿದ್ದಾರೆ. ಆದರೆ ಭಾರತದ ಶಕ್ತಿ ಏನು ಎಂಬುದು ನಮಗೆ ಅಲ್ಲಿದ್ದಾಗಲೇ ಅರಿವಾಗಿದೆ ಎಂದರು.
ರಷ್ಯಾದವರು ಶೆಲ್ಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ನಾವು ಭಾರತದ ಧ್ವಜವನ್ನು ತೋರಿಸಿದ್ವಿ. ಆಗ ಅವರು ನಮ್ಮ ಮೇಲೆ ದಾಳಿ ಮಾಡೋದನ್ನು ನಿಲ್ಲಿಸಿದ್ರು. ಆವಾಗ ನಮಗೆ ಭಾರತದ ಶಕ್ತಿ ಏನು ಎಂಬುದು ಅರಿವಾಯ್ತು. ಭಾರತಕ್ಕೆ ಧೈರ್ಯ ಇಲ್ಲ ಎನ್ನುವವರಿಗೆ ನಾನು ಈ ಮಾತನ್ನು ಹೇಳಲು ಇಷ್ಟ ಪಡುತ್ತೇನೆ ಎಂದು ರುಬಿನಾ ಹೆಮ್ಮೆಯಿಂದ ಹೇಳಿದರು.
ನಾನೀಗ ಭಾರತೀಯಳು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತೆ. ಭಾರತೀಯ ರಾಯಭಾರ ಕಚೇರಿ ನಮ್ಮನ್ನು ಇಲ್ಲಿಗೆ ಕರೆ ತರಲು ಬಹಳ ಸಹಾಯ ಮಾಡಿದೆ. ನಮ್ಮ ದೇಶದವರು ಯಾವ ದೇಶಕ್ಕೂ ಕಮ್ಮಿ ಇಲ್ಲದಂತೆ ನಮ್ಮ ರಕ್ಷಣೆ ಮಾಡಿದ್ದಾರೆ ಎಂದು ರುಬಿನಾ ಮೆಚ್ಚುಗೆ ವ್ಯಕ್ತಪಡಿಸಿದರು.