ರಷ್ಯಾ ಆಯ್ತು ಭಾರತದ ಮೇಲೆ ನಿರ್ಬಂಧ ಹೇರುತ್ತಾ ಅಮೆರಿಕ?

Public TV
2 Min Read
india america

ನವದೆಹಲಿ: ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾ ಮೇಲೆ ಈಗಾಗಲೇ ಹಲವು ನಿರ್ಬಂಧಗಳನ್ನು ಅಮೆರಿಕ ವಿಧಿಸಿದೆ. ಅಂತೆಯೇ ರಷ್ಯಾದೊಂದಿಗೆ ಈ ಹಿಂದೆಯೇ ಭಾರತ ಮಾಡಿಕೊಂಡಿದ್ದ ರಕ್ಷಣಾ ಒಪ್ಪಂದಕ್ಕೂ ಅಮೆರಿಕ ನಿರ್ಬಂಧ ಹಾಕಲಿದೆಯೇ ಎಂಬ ವಿಚಾರ ಚರ್ಚೆಯನ್ನು ಹುಟ್ಟುಹಾಕಿದೆ.

ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳ ಐದು ಘಟಕಗಳನ್ನು ಖರೀದಿಸಲು 2018ರ ಅಕ್ಟೋಬರ್‌ನಲ್ಲಿ ರಷ್ಯಾದೊಂದಿಗೆ ಭಾರತವು ಒಪ್ಪಂದಕ್ಕೆ ಸಹಿ ಹಾಕಿತ್ತು. ಇದನ್ನು ಖರೀದಿಸಲು ಭಾರತಕ್ಕೆ ಅಮೆರಿಕ ನಿರ್ಬಂಧ ಹಾಕುತ್ತಾ ಎಂಬ ವಿಚಾರ ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ. ಇದನ್ನೂ ಓದಿ: ಇರಾಕ್‍ನಿಂದ ತೈಲ ಖರೀದಿಗೆ ನಿರ್ಬಂಧ- ಭಾರತಕ್ಕೆ ಅಮೆರಿಕದಿಂದ ಗುಡ್‍ನ್ಯೂಸ್

s 400 missile

ಎಸ್-400 ಮಿಸೈಲ್ ಡಿಫೆನ್ಸ್ ಸಿಸ್ಟಮ್‌ ಖರೀದಿಸಲು ಕಾಟ್ಸಾ ಕಾನೂನಿನಡಿಯಲ್ಲಿ ಅಮೆರಿಕವು ತನ್ನ ಪ್ರಮುಖ ಪಾಲುದಾರರಲ್ಲಿ ಒಂದಾದ ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸಬೇಕೆ ಅಥವಾ ನಿರ್ಬಂಧವನ್ನು ಮನ್ನಾ ಮಾಡಬೇಕೆ ಎಂಬುದನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ನಿರ್ಧರಿಸುತ್ತಾರೆ ಎಂದು ಹಿಡಿಯ ಆಡಳಿತ ಅಧಿಕಾರಿ ಡೊನಾಲ್ಡ್ ಲೂ ತಿಳಿಸಿದ್ದಾರೆ.

ಆಡಳಿತವು ಕಾಟ್ಸಾ ಕಾನೂನನ್ನು ಅನುಸರಿಸುತ್ತದೆ. ಆ ಕಾನೂನನ್ನು ಸಂಪೂರ್ಣವಾಗಿ ಕಾರ್ಯಗತಗೊಳಿಸುತ್ತದೆ. ಆದರೆ ರಷ್ಯಾ ಮತ್ತು ಉಕ್ರೇನ್ ಯುದ್ಧದ ಸಂದರ್ಭದಲ್ಲಿ ಕಾಟ್ಸಾ ಕಾನೂನಿನ ಅಡಿಯಲ್ಲಿ ನಿರ್ಬಂಧಗಳನ್ನು ವಿಧಿಸುವ ಮತ್ತು ಮನ್ನಾ ಮಾಡುವ ಬಗ್ಗೆ ಯುಎಸ್ ಅಧ್ಯಕ್ಷರ ನಿರ್ಧಾರದ ಬಗ್ಗೆ ನಾನು ಏನನ್ನೂ ಹೇಳಲು ಸಾಧ್ಯವಾಗುವುದಿಲ್ಲ ಎಂದು ಡೊನಾಲ್ಡ್ ಲೂ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಏನಿದು ಎಸ್-400 ಟ್ರಯಂಫ್? ಹೇಗೆ ಕೆಲಸ ಮಾಡುತ್ತೆ? ಅಮೆರಿಕ, ಚೀನಾ, ಪಾಕಿಸ್ತಾನಕ್ಕೆ ಆತಂಕ ಯಾಕೆ?

MODI AND BIDEN

ಭಾರತವು ಈಗ ನಮ್ಮ ಪ್ರಮುಖ ಭದ್ರತಾ ಪಾಲುದಾರ. ಆ ಪಾಲುದಾರಿಕೆಯನ್ನು ಮುಂದುವರಿಸುವುದನ್ನು ನಾವು ಗೌರವಿಸುತ್ತೇವೆ ಎಂದು ಲೂ ಹೇಳಿದ್ದಾರೆ.

ಏನಿದು ಕಾಟ್ಸಾ?:
ರಕ್ಷಣಾ ಹಾಗೂ ಆರ್ಥಿಕ ಒಪ್ಪಂದಗಳನ್ನು ಭದ್ರಪಡಿಸಲು ಅಮೆರಿಕ ಕಾಟ್ಸಾ(ಕೌಂಟರಿಂಗ್ ಅಮೆರಿಕಾಸ್ ಅಡ್ವರ್ಸರೀಸ್ ಥ್ರೂ ಸ್ಯಾಂಕ್ಷನ್ಸ್ ಆಕ್ಟ್) ಕಾಯ್ದೆಯನ್ನು ತಂದಿದೆ. ವಿಶ್ವದ ದೊಡ್ಡಣ್ಣನಾಗಿರುವ ಅಮೆರಿಕ ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಜೊತೆ ಉತ್ತಮ ಬಾಂಧವ್ಯಕ್ಕಾಗಿ ದ್ವಿಪಕ್ಷೀಯ ಮಾತುಕತೆ ನಡೆಸುತ್ತದೆ. ದ್ವಿಪಕ್ಷೀಯ ಸಂಬಂಧ ಹೊಂದಿರುವ ದೇಶಗಳು ಅಮೆರಿಕ ನಿರ್ಬಂಧ ಹೇರಿದ ದೇಶಗಳೊಂದಿಗೆ ರಕ್ಷಣಾ ವ್ಯವಹಾರ ನಡೆಸಿದರೆ ಆ ದೇಶಗಳ ಮೇಲೆ ನಿರ್ಬಂಧ ಹೇರುವ ಅಧಿಕಾರ ಈ ಕಾಯ್ದೆಯಲ್ಲಿದೆ.

NARENDRA MODI AND PUTIN

ಹಿಂದೆಯೂ ನಿರ್ಬಂಧ ವಿಧಿಸಲಾಗಿತ್ತು:
ಭಯೋತ್ಪಾದನೆಗೆ ಉತ್ತೇಜನ ನೀಡುತ್ತಿದೆ ಎಂದು 2018ರಲ್ಲಿ ಇರಾನ್‌ಗೆ ಅಮೆರಿಕ ಹಲವು ನಿರ್ಬಂಧಗಳನ್ನು ವಿಧಿಸಿತ್ತು. ಈ ವೇಳೆ ಭಾರತ ಸೇರಿದಂತೆ 8 ರಾಷ್ಟ್ರಗಳು ಇರಾನ್‌ನಿಂದ ತೈಲ ಆಮದು ಮಾಡಿಕೊಳ್ಳಬಾರದು ಎಂದು ನಿರ್ಬಂಧಿಸಿತ್ತು. ಆದರೆ ತೈಲ ಖರೀದಿಗೆ ಅವಕಾಶ ಮಾಡಿಕೊಡಬೇಕು ಎಂದು ಆ ರಾಷ್ಟ್ರಗಳು ಒತ್ತಾಯಿಸಿದ ನಂತರ ನಿರ್ಬಂಧವನ್ನು ತೆರವುಗೊಳಿಸಲಾಗಿತ್ತು. ಇದನ್ನೂ ಓದಿ: ಉಕ್ರೇನ್ ವಿರುದ್ಧ ಯುದ್ಧ – ಚರ್ಚೆಯಾಗುತ್ತಿದೆ ಭಾರತದ ಐತಿಹಾಸಿಕ ಕೊಹಿನೂರು ವಜ್ರ

ವಿಶ್ವಸಂಸ್ಥೆಯ ಕಾಯ್ದೆಯಲ್ಲ:
ರಷ್ಯಾದಿಂದ ಟ್ರಯಂಫ್ ಖರೀದಿಗೆ ಅಮೆರಿಕದಿಂದ ವಿರೋಧ ವ್ಯಕ್ತವಾಗುತ್ತಿದ್ದ ಬೆನ್ನಲ್ಲೇ 2018ರಲ್ಲಿ ಆಗಿನ ರಕ್ಷಣಾ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಪ್ರತಿಕ್ರಿಯಿಸಿ, ಕಾಟ್ಸಾ ಕಾಯ್ದೆ ಅಮೆರಿಕದ್ದು ಹೊರತು ವಿಶ್ವಸಂಸ್ಥೆಯದ್ದಲ್ಲ. ಇದು ಭಾರತ ಮತ್ತು ರಷ್ಯಾದ ಆಂತರಿಕ ವಿಚಾರ ಎಂದು ಹೇಳಿ ತಿರುಗೇಟು ನೀಡಿದ್ದರು.

Share This Article