ಶಾಂತಿ ಸಭೆ ಮೊಟಕು – ಬೇಷರತ್‌ ಕದನ ವಿರಾಮ ಮಾತುಕತೆ ತಿರಸ್ಕರಿಸಿದ ರಷ್ಯಾ

Public TV
2 Min Read
Vladimir Putin

ಇಸ್ತಾನ್‌ಬುಲ್‌: ಯುದ್ಧಪೀಡಿತ ರಷ್ಯಾ-ಉಕ್ರೇನ್‌ ನಡುವೆ 2022ರ ಬಳಿಕ 2ನೇ ಸುತ್ತಿನ ಶಾಂತಿ ಮಾತುಕತೆ ಸೋಮವಾರ ಟರ್ಕಿಯ ರಾಜಧಾನಿ ಇಸ್ತಾನ್‌ಬುಲ್‌ನಲ್ಲಿ ನಡೆಯಿತು. ಸಭೆಯು ನಿಗದಿತ ಸಮಯಕ್ಕಿಂತ 2 ಗಂಟೆ ತಡವಾಗಿ ಶುರುವಾದ್ರೂ ಒಂದು ಗಂಟೆಗೆ ಮಾತುಕತೆ ಮುಕ್ತಾಯಗೊಂಡಿತು. ಉಭಯ ರಾಷ್ಟ್ರಗಳ ನಾಯಕರು ಪರಸ್ಪರ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು ಕಂಡುಬಂದಿತು.

ಸಭೆಯ ಆರಂಭದಲ್ಲೇ ಉಕ್ರೇನ್‌ ನಡೆಸಿದ ಡ್ರೋನ್‌ ದಾಳಿ ವಿಚಾರ ಬಲವಾಗಿ ವಿರೋಧಿಸಿದ ರಷ್ಯಾ ಪ್ರತಿನಿಧಿಗಳು, ಉಕ್ರೇನ್‌ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಭಾನುವಾರದ ದಾಳಿಗೆ ತಿರುಗೇಟು ನೀಡುವ ಶಕ್ತಿ ನಮಗೂ ಇದೆ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: ನಾವು ಭಿಕ್ಷೆ ಪಾತ್ರೆ ಹಿಡಿದು ಬರುತ್ತೇವೆಂದು ಚೀನಾದಂಥ ಮಿತ್ರರಾಷ್ಟ್ರಗಳು ನಿರೀಕ್ಷಸಲ್ಲ: ಪಾಕ್‌ ಪ್ರಧಾನಿ

ರಷ್ಯಾ ಮೇಲೆ ಉಕ್ರೇನ್ ನಡೆಸಿದ ಭೀಕರ ಡ್ರೋನ್ ದಾಳಿಯೇ ಎಲ್ಲದಕ್ಕೂ ಕಾರಣ. ರಷ್ಯಾ ಪ್ರತಿನಿಧಿಗಳು ಉಕ್ರೇನ್‌ನ ಈ ದಾಳಿಯನ್ನು ಬಲವಾಗಿ ವಿರೋಧಿಸಿ, ಷರತ್ತುರಹಿತ ಕದನ ವಿರಾಮ ಮಾತುಕತೆಯನ್ನ ತಿರಸ್ಕರಿಸಿದರು. ʻಆಪರೇಷನ್ ಸ್ಪೈಡರ್ಸ್ ವೆಬ್ʼ ಎಂದು ಹೆಸರಿಸಲಾದ ಈ ರಹಸ್ಯ ಕಾರ್ಯಾಚರಣೆಯಲ್ಲಿ, ಉಕ್ರೇನ್ ಒಂದೂವರೆ ವರ್ಷದಿಂದ ಯೋಜನೆ ರೂಪಿಸಿತ್ತು. ಹೀಗಾಗಿ ಇಸ್ತಾನ್‌ಬುಲ್‌ನಲ್ಲಿ ನಡೆದ ಉಕ್ರೇನ್‌ನೊಂದಿಗಿನ ಶಾಂತಿ ಮಾತುಕತೆಯ ಸಮಯದಲ್ಲಿ ರಷ್ಯಾ ಬೇಷರತ್‌ ಕದನ ವಿರಾಮಕ್ಕೆ ಒಪ್ಪಿಕೊಳ್ಳಲು ನಿರಾಕರಿಸಿದೆ ಎಂದು ಕೈವ್ ಸಂಧಾನಕಾರರು ತಿಳಿಸಿದ್ದಾರೆ.

ಸೇನಾ ದಾಳಿಯ ವಿಚಾರವಾಗಿ ಉಭಯ ದೇಶಗಳ ಪ್ರತಿನಿಧಿಗಳ ನಡುವಿನ ವಾಗ್ವಾದದಿಂದ ಸಭೆ ಅಪೂರ್ಣಗೊಂಡಿತು. ‘ಕದನ ವಿರಾಮ ಸಂಬಂಧ ಉಭಯ ದೇಶದ ಪ್ರತಿನಿಧಿಗಳ ನಡುವೆ ಮಾತುಕತೆ ನಡೆದಿದೆ. ಸಂಘರ್ಷ ಪರಿಸ್ಥಿತಿಯ ಬಗ್ಗೆ ಮೌಲ್ಯಮಾಪನ ಮಾಡಲಾಗಿದೆ. ಯುದ್ಧ ಕೈದಿಗಳ ಹಸ್ತಾಂತರದ ಬಗ್ಗೆಯೂ ಚರ್ಚಿಸಲಾಗಿದೆ. ಆದರೆ, ಸಂಘರ್ಷ ಕೊನೆಗೊಳಿಸುವ ವಿಷಯವಾಗಿ ಅಂತಿಮ ನಿರ್ಧಾರಕ್ಕೆ ಬಂದಿಲ್ಲ ಎಂದು ಟರ್ಕಿ ವಿದೇಶಾಂಗ ಸಚಿವ ಹಕನ್‌ ಫಿಡಾನ್‌ ತಿಳಿಸಿದ್ದಾರೆ. ಇದನ್ನೂ ಓದಿ: America | ‘ಫ್ರೀ ಪ್ಯಾಲೆಸ್ತೀನ್’ ಎಂದು ಕೂಗುತ್ತಾ ಜನರತ್ತ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿ – 6 ಮಂದಿಗೆ ಗಾಯ

ಚರ್ಚೆ ವೇಳೆ ರಷ್ಯಾ ಪ್ರತಿನಿಧಿ ಮೆಡಿನ್ಸ್ಕಿ ಅವರು, ಯುದ್ಧದಲ್ಲಿ ಕೊಲಲ್ಪಟ್ಟ 6,000 ಉಕ್ರೇನಿಯನ್ ಸೈನಿಕರ ಶವಗಳನ್ನ ಹಿಂದಿರುಗಿಸುವುದಾಗಿ ತಿಳಿಸಿದರು. ಹಾಗಾಗಿ 2-3 ದಿನಗಳ ಸೀಮಿತ ಕದನ ವಿರಾಮ ಪ್ರಸ್ತಾಪಿಸಲಾಗಿದೆ. ಇದು ಸೈನಿಕರ ಮೃತದೇಹಗಳನ್ನು ಹಸ್ತಾಂತರಿಸುವ ಉದ್ದೇಶ ಮಾತ್ರ ಹೊಂದಿದೆ ಎಂದು ತಿಳಿಸಿದರು.

ಪರಸ್ಪರ 1,000 ಯುದ್ಧ ಕೈದಿಗಳ ವಿನಿಮಯ ಒಪ್ಪಂದ
ಉಕ್ರೇನ್‌ ಮತ್ತು ರಷ್ಯಾ ನಡುವೆ ತಲಾ 1,000 ಯುದ್ಧ ಕೈದಿಗಳ ವಿನಿಮಯದ ಕುರಿತು ರಷ್ಯಾ ಮತ್ತು ಉಕ್ರೇನ್ ಒಪ್ಪಂದಕ್ಕೆ ಬಂದಿವೆ. ಮುಂದುವರಿದು… ಯುದ್ಧ ಕೈದಿಗಳ ವಿನಿಮಯಕ್ಕಾಗಿ ಶಾಶ್ವತ ಸಮಿತಿ ರಚನೆಯ ಕುರಿತು ಒಪ್ಪಂದಕ್ಕೆ ಬರಲಾಗಿದೆ. ಇದರಿಂದ ಭವಿಷ್ಯದಲ್ಲಿ ಯುದ್ಧ ಕೈದಿಗಳ ಪ್ರಕ್ರಿಯೆಯನ್ನು ತ್ವರಿತವಾಗಿ ಮತ್ತು ಸರಾಗವಾಗಿ ಪೂರ್ಣಗೊಳಿಸಬಹುದು ಎಂದು ರಷ್ಯಾ ಪ್ರತಿನಿಧಿ ತಿಳಿಸಿದ್ರು.

ಅಲ್ಲದೇ, ಕ್ರೈಮಿಯಾ, ಡಾನ್‌ಬಾಸ್, ಖೆರ್ಸನ್ ಮತ್ತು ಜಪೊರೊಝೈಗಳನ್ನು ರಷ್ಯಾದ ಪ್ರದೇಶವೆಂದು ಅಂತಾರಾಷ್ಟ್ರೀಯವಾಗಿ ಗುರುತಿಸಬೇಕೆಂದು ಒತ್ತಾಯಿಸಿ ರಷ್ಯಾ ಉಕ್ರೇನ್‌ಗೆ ಶಾಂತಿ ಜ್ಞಾಪಕ ಪತ್ರವನ್ನ ಪ್ರಸ್ತಾಪಿಸಿದೆ ಎಂದು ತಿಳಿದುಬಂದಿದೆ. ಈ ನಡುವೆ ಎರಡೂ ದೇಶಗಳು ಹೊಸ ಕೈದಿಗಳ ವಿನಿಮಯಕ್ಕಾಗಿ ಒಪ್ಪಿಕೊಂಡಿರುವುದಾಗಿ ಹೇಳಿದರು. ಇದನ್ನೂ ಓದಿ: ರಷ್ಯಾ ವಾಯುನೆಲೆ ಮೇಲೆ ಉಕ್ರೇನ್ ಡ್ರೋನ್ ದಾಳಿ – ಅದ್ಭುತ ಕಾರ್ಯಾಚರಣೆ ಎಂದು ಶ್ಲಾಘಿಸಿದ ಝೆಲೆನ್ಸ್ಕಿ

Share This Article