ಬಿಗ್ ಬಾಸ್ ಸೀಸನ್ 9ರ (Bigg Boss) ಸ್ಪರ್ಧಿ, ನಟ ರೂಪೇಶ್ ಶೆಟ್ಟಿ ಅಭಿನಯದ ‘ಮಂಕು ಭಾಯ್ ಫಾಕ್ಸಿ ರಾಣಿ’ (Manku Bhai Foxy Rani) ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಟೈಟಲ್ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿರುವ ಚಿತ್ರತಂಡ ಸಿನಿಮಾ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಚಿತ್ರದ ಹಾಡುಗಳ ಮೂಲಕ ಎಲ್ಲರ ಮನಸೂರೆಗೊಳ್ಳುತ್ತಿದೆ. ಸದ್ಯ ಈ ಚಿತ್ರದ ‘ತಂಗಾಳಿಯೇ ತಲುಪಿಸು’ ಹಾಡು ಬಿಡುಗಡೆಯಾಗಿ (Release) ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಚಿತ್ರದ ಪ್ಯಾಥೋ ಸಾಂಗ್ ಆಗಿರುವ ‘ತಂಗಾಳಿಯೇ ತಲುಪಿಸು’ ಹಾಡು ಬಿಡುಗಡೆಯಾಗಿದ್ದು, ತಮಿಳಿನ ಖ್ಯಾತ ಗಾಯಕ ಹರಿಚರಣ್ ಹಾಡಿಗೆ (Song) ದನಿಯಾಗಿದ್ದಾರೆ. ಕೀರ್ತನ್ ಭಂಡಾರಿ ಸಾಹಿತ್ಯ, ವಿನ್ಯಾಸ್ ಮದ್ಯ ಸಂಗೀತ ಸಂಯೋಜನೆ ಈ ಹಾಡಿಗಿದ್ದು ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಈ ಹಿಂದೆ ಬಿಡುಗಡೆಯಾದ ಸೋನು ನಿಗಮ್ ಕಂಠಸಿರಿಯಲ್ಲಿ ಮೂಡಿಬಂದ ‘ಮಿಂಚಂತೆ ಮಿನುಗುತಿರೊ’ ಹಾಡು ಕೂಡ ಕೇಳುಗ ಪ್ರಿಯರ ಮನಗೆದ್ದಿತ್ತು. ಇದನ್ನೂ ಓದಿ:ದೇಶ-ವಿದೇಶದಲ್ಲಿ ಮಾರ್ದನಿಸ್ತಿರೋ ಗಗ್ಗರ ಶಬ್ಧ- ಅಮೆರಿಕಾದಲ್ಲಿ ಎಂಟೂವರೆ ಕೋಟಿ ಬಾಚಿದ ಕಾಂತಾರ
ಬಿಗ್ ಬಾಸ್ ಒಟಿಟಿ ಸೀಸನ್ ವಿನ್ನರ್, ಬಿಗ್ ಬಾಸ್ ಸೀಸನ್ 9ರ ಸ್ಪರ್ಧಿ ಕೂಡ ಆಗಿರುವ ರೂಪೇಶ್ ಶೆಟ್ಟಿ (Rupesh Shetty) ಈಗಾಗಲೇ ಹಲವು ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಚಿತ್ರದಲ್ಲಿ ವಿಭಿನ್ನ ಗೆಟಪ್ ನಲ್ಲಿ ಕಾಣಸಿಕೊಂಡಿದ್ದು, ಇವರಿಗೆ ನಾಯಕಿಯರಾಗಿ ಬ್ರಹ್ಮಗಂಟು ಧಾರಾವಾಹಿ ಖ್ಯಾತಿಯ ಗೀತಾ ಭಾರತಿ, ಪಂಚಮಿ ರಾವ್ ಅಭಿನಯಿಸಿದ್ದಾರೆ. ಲವ್, ಸಸ್ಪೆನ್ಸ್ ಕಥಾಹಂದರ ಒಳಗೊಂಡ ಈ ಚಿತ್ರಕ್ಕೆ ಯುವ ಪ್ರತಿಭೆ ಗಗನ್ ಎಂ ಆಕ್ಷನ್ ಕಟ್ ಹೇಳಿದ್ದಾರೆ. ಕಿರುಚಿತ್ರ ಹಾಗೂ ಕೆಲ ತುಳು ಸಿನಿಮಾಗಳಿಗೆ ಸಹ ನಿರ್ದೇಶಕನಾಗಿ ಕೆಲಸ ಮಾಡಿದ ಅನುಭವ ಇವರಿಗಿದ್ದು, ‘ಮಂಕು ಭಾಯ್ ಫಾಕ್ಸಿ ರಾಣಿ’ ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಹೊರ ಹೊಮ್ಮಿದ್ದಾರೆ.
ನಿರ್ಮಾಪಕ ಜೋಶ್ವ ಜೈಶಾನ್ ಕ್ರಾಸ್ತ ‘ಜೋಶ್ವ ಮೀಡಿಯಾ ಪ್ರೈವೇಟ್’ ಲಿಮಿಟೆಡ್ ಬ್ಯಾನರ್ ನಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ವಿನ್ಯಾಸ್ ಮದ್ಯ, ಶಮೀರ್ ಮುಡಿಪು ಸಂಗೀತ ನಿರ್ದೇಶನ, ಶಿನೋಯ್ ವಿ ಜೋಸೆಫ್ ಹಿನ್ನೆಲೆ ಸಂಗೀತ, ಎಂ.ಕೆ ಷಜಹಾನ್ ಕ್ಯಾಮೆರಾ ನಿರ್ದೇಶನ, ಸುಶಾಂತ್ ಶೆಟ್ಟಿ, ಪ್ರಜ್ವಲ್ ಸುವರ್ಣ ಸಂಕಲನ ಚಿತ್ರಕ್ಕಿದೆ. ಪ್ರಕಾಶ್ ತೂಮಿನಾಡು, ಅರ್ಜುನ ಕಜೆ, ಪ್ರಶಾಂತ್ ಅಂಚನ್, ವಿವೇಕ್ ಶೆಟ್ಟಿ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ.