ಬಿಗ್ ಬಾಸ್ (Bigg Boss Season 9) ಮನೆಯಲ್ಲಿ ಪ್ರಶಾಂತ್ ಸಂಬರ್ಗಿ (Prashant Sambargi) ಮತ್ತು ರೂಪೇಶ್ ರಾಜಣ್ಣ ನಡೆ ಒಂದು ಕಡೆಯಾದರೆ, ಉಳಿದವರ ಆಟ ಮತ್ತೊಂದು ಕಡೆ ಆಗಿದೆ. ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಎಳೆಯಿತು ಅಂತಾರಲ್ಲ ಹಾಗಾಗಿದೆ ಬಿಗ್ ಬಾಸ್ ಮನೆಯ ಪರಿಸ್ಥಿತಿ. ದೊಡ್ಮನೆಯಲ್ಲಿರುವ ಬಹುತೇಕ ಸದಸ್ಯರು ಟಾಸ್ಕ್ ಗಾಗಿ ಕಿತ್ತಾಡಿಕೊಂಡರೆ, ಸಂಬರ್ಗಿ ಮತ್ತು ರೂಪೇಶ್ ವೈಯಕ್ತಿಕ ಕಾರಣಗಳಿಗಾಗಿ ಜಗಳ ಮಾಡುತ್ತಿದ್ದಾರೆ. ಈ ಜಗಳವು ಅವರ ಕುಟುಂಬದ ಸದಸ್ಯರಿಗೆ ಮುಜುಗರ ಪಡುವಂತಾಗಿದೆ.
ವೈಯಕ್ತಿಕವಾಗಿ ಅವರಿಬ್ಬರೂ ಹೇಗಾದರೂ ಕಿತ್ತಾಡಿಕೊಳ್ಳಲಿ, ಯಾವ ಪದಗಳಿಂದಲಾದರೂ ನಿಂದಿಸಿಕೊಳ್ಳಲಿ. ಆದರೆ, ತಮ್ಮ ಮನೆಯ ಸದಸ್ಯರಿಗೆ ಅಪಮಾನ ಮಾಡುವಂತಹ ಮಾತುಗಳನ್ನು ಆಡುವುದು ಸರಿಯಲ್ಲ ಎನ್ನುವ ಮಾತು ಬಿಗ್ ಬಾಸ್ ಪ್ರೇಮಿಗಳದ್ದು. ಗೋಲ್ಡ್ ಮೈನ್ ಟಾಸ್ಕ್ ನಲ್ಲಂತೂ ಇಬ್ಬರೂ ನಾಲಿಗೆ ಹರಿಬಿಟ್ಟು, ತಮ್ಮ ಮರ್ಯಾದೆಯನ್ನು ತಾವೇ ಕಳೆದುಕೊಂಡಿದರು. ಅದರಲ್ಲೂ ಪ್ರಶಾಂತ್ ಸಂಬರ್ಗಿ ತಾಯಿಗೆ ಅಪಮಾನ ಮಾಡುವ ರೀತಿಯಲ್ಲಿ ರೂಪೇಶ್ ರಾಜಣ್ಣ ಮಾತನಾಡಿ ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿದುಕೊಂಡರು. ರೂಪೇಶ್ (Rupesh Rajanna) ಆಡಿದ ಆ ಮಾತು ಸಂಬರ್ಗಿಯನ್ನು ಸಖತ್ ಕೆರಳಿಸಿತು. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ ರೂಪೇಶ್ ರಾಜಣ್ಣ ಮೇಲೆ ಪ್ರಶಾಂತ್ ಸಂಬರ್ಗಿ ವಾಗ್ದಾಳಿ
ಇದೇ ವಿಚಾರವಾಗಿ ಸಂಬರ್ಗಿ ಮತ್ತು ರೂಪೇಶ್ ಪದೇ ಪದೇ ಜಗಳ ಮಾಡುತ್ತಿದ್ದಾರೆ. ‘ನನ್ನ ತಾಯಿಗೆ ಅವಮಾನ ಮಾಡಿದ್ದೀರಿ. ಇದು ಮಾನನಷ್ಟ ಮೊಕದ್ದಮೆ ಹೂಡುವಂತಹ ಪದವಾಗಿದೆ. ನಮ್ಮ ತಾಯಿಯ ಮಾನವನ್ನು ಕರ್ನಾಟಕದ ಜನತೆ ಮುಂದೆ ಹರಾಜು ಹಾಕಿದ್ದೀರಿ. ನಾನು ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ರೂಪೇಶ್ ಮೇಲೆ ಸಂಬರ್ಗಿ ಕೂಗಾಡಿದ್ದಾರೆ. ಕೊನೆಗೂ ತಾವು ಮಾಡಿದ್ದ ತಪ್ಪಿನ ಅರಿವಾಗಿ ರೂಪೇಶ್ ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ. ನಾನು ಆ ಎರಡು ಪದಗಳನ್ನು ಆಡಬಾರದಿತ್ತು. ಆಡಿದ್ದಕ್ಕೆ ಕ್ಷಮೆ ಕೇಳುವೆ. ಆದರೆ ಉಳಿದ ಪದಗಳಿಗೆ ನಾನು ಬದ್ಧನಾಗಿದ್ದೇನೆ ಎಂದು ಮತ್ತೆ ಚುಚ್ಚಿದ್ದಾರೆ.
ಗೋಲ್ಡ್ ಮೈನ್ ಟಾಸ್ಕ್‌ನಲ್ಲಿ ಪ್ರಶಾಂತ್ ಸಂಬರ್ಗಿಗೆ ರಾಜಾ ಇಲಿ, ಹೇಡಿ, ಕುತಂತ್ರಿ ಅಂತೆಲ್ಲ ಕರೆದಿದ್ದಾರೆ ರೂಪೇಶ್ ರಾಜಣ್ಣ. ಇಷ್ಟೆಲ್ಲ ಅನಿಸಿಕೊಂಡಿದ್ದ ಸಂಬರ್ಗಿ ಕೂಡ ಸುಮ್ಮನೆ ಕೂತಿಲ್ಲ, ರೂಪೇಶ್ ರಾಜಣ್ಣಗೂ ಬಾಯಿಗೆ ಬಂದಂತೆ ಬೈದಿದ್ದಾರೆ. ರೋಲ್‌ಕಾಲ್ ಹೋರಾಟಗಾರ ಎಂದೆಲ್ಲ ಜರಿದಿದ್ದಾರೆ. ‘ತಾವು ರೋಲ್‌ಕಾಲ್ ಮಾಡಿದ್ರೆ ಪ್ರೂ ಮಾಡಿ. ನೇಣಿಗೂ ಸಿದ್ಧನಿದ್ದೇನೆ’ ಎಂದು ರೂಪೇಶ್ ರಾಜಣ್ಣ ಮರು ಉತ್ತರ ನೀಡಿದ್ದರು. ಈ ಇಬ್ಬರ ಗಲಾಟೆ ಬಿಗ್ ಬಾಸ್ ನೋಡುಗರಿಗಂತೂ ಸಖತ್ ಕಿರಿಕಿರಿ ಮಾಡುತ್ತಿರುವುದಂತೂ ಸತ್ಯ.