ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Elections) ಹಿನ್ನೆಲೆಯಲ್ಲಿ ಮಹಿಳೆಯರಿಗೆ ವಾರ್ಷಿಕ 1 ಲಕ್ಷ ರೂ. ನೀಡುವ ಯೋಜನೆ ಜಾರಿಗೊಳಿಸುವುದಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಈ ಹಿನ್ನೆಲೆ ಬೆಂಗಳೂರು ಪ್ರಧಾನ ಅಂಚೆ ಕಚೇರಿಗೆ (GPO) ಕಳೆದ ಎರಡು ದಿನಗಳಿಂದ ಬೆಳ್ಳಂ ಬೆಳಗ್ಗೆ ಆಗಮಿಸಿ ಅಂಚೆ ಖಾತೆ ತೆರೆಯಲು ಮುಗಿಬಿದ್ದಿದ್ದರು.
ಪ್ರತಿ ತಿಂಗಳು ಖಾತೆಗೆ 8 ಸಾವಿರ ರೂ. ಹಣ ಜಮೆಯಾಗುವ ಈ ಯೋಜನೆ ಜಾರಿಗೆ ಬರಲಿದೆ ಎಂಬ ವಿಶ್ವಾಸದಿಂದ ಮಹಿಳೆಯರು ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ (IPPB) ಅಡಿ ಖಾತೆ ತೆರೆಯಲು ನಗರದ ವಿವಿಧ ಭಾಗಗಳಿಂದ ದೊಡ್ಡ ಸಂಖ್ಯೆಯಲ್ಲಿ ಆಗಮಿಸಿದ್ದರು. ಈ ಹಿನ್ನೆಲೆ ಬೆಂಗಳೂರು ಕಚೇರಿಯಲ್ಲೂ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಖಾತೆಗಳನ್ನು ತೆರೆಯಲು ಅವಕಾಶ ಮಾಡಿಕೊಡಲಾಗಿತ್ತು. ಇಂಡಿಯನ್ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅಕೌಂಟ್ (Post Office Accounts) ತೆರೆದವರ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂಬ ವದಂತಿಗಳು ಕಳೆದ ವಾರಾಂತ್ಯದಲ್ಲಿ ಹರಿದಾಡುತ್ತಿದ್ದವು. ಇದರಿಂದ ಮಹಿಳೆಯರು ಪೋಸ್ಟ್ ಆಫೀಸ್‌ಗಳಿಗೆ ಮುಗಿ ಬಿದ್ದಿದ್ದರು.
Advertisement
Advertisement
ಎರಡು ವರ್ಷಗಳ ಹಿಂದೆಯೇ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ಅಕೌಂಟ್ ಯೋಜನೆಯನ್ನು ಪರಿಚಯಿಸಲಾಗಿದ್ದು, ಇದು ಉಳಿತಾಯ ಖಾತೆಯಾಗಿರುತ್ತದೆ. ಆದರೆ ಈಗ ವದಂತಿ ಹರಡಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಈ ಖಾತೆ ತೆರೆಯಲು ಮುಂದಾಗಿದ್ದಾರೆ ಎಂದು ಅಂಚೆ ಕಚೇರಿ ಅಧಿಕಾರಿಗಳು ತಿಳಿಸಿದ್ದಾರೆ.
Advertisement
Advertisement
ಕಳೆದ 15 ದಿನಗಳಿಂದ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಖಾತೆ ಮಾಡಿಸಲು ದಾಂಗುಡಿಯಿಡುತ್ತಿದ್ದು, ಬೆಂಗಳೂರು ಅಂಚೆ ಕಚೇರಿ ಸಿಬ್ಬಂದಿ ಸಂಪೂರ್ಣ ಹೈರಾಣಾಗಿದ್ದಾರೆ. ನಿತ್ಯ ಬೆಳಗ್ಗೆ 4 ಗಂಟೆಯಿಂದಲೇ ಟೋಕನ್ ಪಡೆದು ಖಾತೆ ಮಾಡಿಸಲು ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಕಚೇರಿ ಸಿಬ್ಬಂದಿಯಾಗಲಿ, ಅಧಿಕಾರಿಗಳಾಗಲಿ ಮಹಿಳೆಯರನ್ನ ಕೇಳಿದ್ರೆ `ಅಕ್ಕಪಕ್ಕದವರು ಅಕೌಂಟ್‌ಗೆ ಹಣ ಬರುತ್ತೆ ಅಂತ ಹೇಳಿದ್ರು. ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಹಣ ನೀಡುತ್ತಾರಂತೆ. ಅದಕ್ಕಾಗಿ ಖಾತೆ ಮಾಡಿಸಲು ಕ್ಯೂನಲ್ಲಿ ನಿಂತಿದ್ದೇವೆ’ ಅಂತಾ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಧಿಕಾರಿಗಳು, 8,500 ರೂ. ಖಾತೆಗೆ ಬರುವ ಯಾವ್ದೇ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ, ಇದೆಲ್ಲವೂ ವದಂತಿ ಎಂದು ಹೇಳಿದ್ದಾರೆ. ಈ ಬಗ್ಗೆ ಜನರಿಗೆ ಮಾಹಿತಿ ನೀಡುವಂತೆಯೂ ಅಧಿಕಾರಿಗಳು ಅಂಚೆ ಕಚೇರಿ ಸಿಬ್ಬಂದಿಗೆ ಹೇಳಿದ್ದಾರೆ.