ವ್ಯವಹಾರದಾಚೆ ಸಿನಿಮಾ ಪ್ರೇಮ ಹೊಂದಿರುವ, ಕಥೆಯೊಂದನ್ನು ಆ ಕ್ಷಣದಲ್ಲಿಯೇ ಅಳೆದೂ ತೂಗಿ ನಿರ್ಧರಿಸುವ ಛಾತಿ ಹೊಂದಿರುವ ನಿರ್ಮಾಪಕರ ಆಗಮನವಾಗೋದು ಚಿತ್ರರಂಗದ ಪಾಲಿಗೆ ಸಕಾರಾತ್ಮಕ ವಿದ್ಯಮಾನ. ಇಂಥವರ ಬೆಂಬಲದಿಂದಷ್ಟೇ ಒಳ್ಳೆ ಕಥೆಗಳು, ಪ್ರತಿಭಾನ್ವಿತರ ಕನಸುಗಳು ಕಾರ್ಯ ರೂಪಕ್ಕೆ ಬರಲು ಸಾಧ್ಯ. ಇದೇ ಜ.24 ರಂದು ಬಿಡುಗಡೆಗೆ ತಯಾರಾಗಿರುವ `ರುದ್ರ ಗರುಡ ಪುರಾಣ’ (Rudra Garuda Purana) ಚಿತ್ರದ ಮೂಲಕ ಅಂಥಾದ್ದೇ ಅಭಿರುಚಿ ಹೊಂದಿರುವ ಲೋಹಿತ್ ನಿರ್ಮಾಣ ಕ್ಷೇತ್ರಕ್ಕಿಳಿದಿದ್ದಾರೆ. ಈ ಸಿನಿಮಾ ನಿರ್ಮಾಣ ಮಾಡಿರೋದು ಅವರ ಮಡದಿ ಅಶ್ವಿನಿ ವಿಜಯ್ ಲೋಹಿತ್. ಈ ಮೂಲಕ ಆರಂಭದಿಂದಲೂ ಸಿನಿಮಾ ಗುಂಗು ಹತ್ತಿಸಿಕೊಂಡಿದ್ದ ಲೋಹಿತ್ ಅವರ ಕನಸು ನನಸಾದಂತಾಗಿದೆ.
ಲೋಹಿತ್ ಕ್ಲಾಸ್ 1 ಪಿಡಬ್ಲ್ಯೂಡಿ ಕಾಂಟ್ರಾಕ್ಟರ್ ಆಗಿ ವೃತ್ತಿ ನಡೆಸುತ್ತಿರುವವರು. ಈ ಕೆಲಸದ ಒತ್ತಡದ ನಡುವೆಯೂ ಸಿನಿಮಾ ಜಗತ್ತಿನ ಸಾಂಗತ್ಯವಿಟ್ಟುಕೊಂಡಿದ್ದರು. ಸಿನಿಮಾ ಕ್ಷೇತ್ರದ ಬಗ್ಗೆ ನಾನಾ ದಿಕ್ಕಿನ ಕನಸಿಟ್ಟುಕೊಂಡಿದ್ದ ಲೋಹಿತ್ ಪಾಲಿಗೆ ಆ ಜಗತ್ತಿನ ಭಾಗವಾಗಿ ಕಾರ್ಯನಿರ್ವಹಸಬೇಕೆಂಬ ಉತ್ಕಟ ಆಕಾಂಕ್ಷೆಯೂ ಇತ್ತು. ಕಡೆಗೂ ಅದಕ್ಕೆ ಮುಹೂರ್ತ ಕೂಡಿ ಬಂದಿದ್ದು ವರ್ಷದ ಹಿಂದೆ. ಅದಾಗಲೇ ಒಂದೊಳ್ಳೆ ಕಥೆ ರೆಡಿ ಮಾಡಿಕೊಂಡು, ಸಿನಿಮಾಕ್ಕೆ ಬೇಕಾದ ಸರ್ವ ಸಿದ್ಧತೆಯೊಂದಿಗೆ ನಿರ್ಮಾಪಕರಿಗಾಗಿ ಹುಡುಕಾಟದಲ್ಲಿದ್ದವರು ನಿರ್ದೇಶಕ ನಂದೀಶ್. ಇದನ್ನೂ ಓದಿ: ರುದ್ರ ಗರುಡ ಪುರಾಣ; ಭಿನ್ನ ಕಥೆಯ ಚುಂಗು ಹಿಡಿದು ಬಂದ್ರು ನಂದೀಶ್!
Advertisement
Advertisement
ನಂದೀಶ್ ಲೋಹಿತ್ ಅವರಿಗೆ ಹಲವಾರು ವರ್ಷಗಳಿಂದಲೂ ಪರಿಚಿತರು. ಈ ಚಿತ್ರಕ್ಕೆ ರಿಷಿ ಅವರೇ ನಾಯಕನಾಗಬೇಕೆಂಬ ನಿರ್ಧಾರಕ್ಕೆ ಬಂದಿದ್ದ ನಂದೀಶ್ ಅದಾಗಲೇ ರಿಷಿಗೆ ಕಥೆ ಹೇಳಿಯಾಗಿತ್ತು. ಈ ಕಥೆಯನ್ನು ಕೇಳಿ ಥ್ರಿಲ್ ಆಗಿದ್ದ ಲೋಹಿತ್ ಕೂಡಾ ಈ ಸಿನಿಮಾ ನಿರ್ಮಾಣ ಮಾಡಬೇಕೆಂಬ ನಿರ್ಧಾರಕ್ಕೆ ಬಂದಿದ್ದರು. ಅವರ ಪಾಲಿಗೆ ಮತ್ತೊಂದು ಖುಷಿಯ ಸಂಗತಿ ನಂದೀಶ್ ಕಡೆಯಿಂದ ಸಿಕ್ಕಿತ್ತು. ಅದು ಸದರಿ ಕಥೆಯನ್ನು ರಿಷಿ ಮೆಚ್ಚಿಕೊಂಡು ಒಪ್ಪಿಕೊಂಡಿದ್ದಾರೆಂಬ ವಿಚಾರ. ಇದನ್ನು ಕೇಳಿ ಲೋಹಿತ್ ಮತ್ತಷ್ಟು ಭರವಸೆ ತುಂಬಿಕೊಂಡಿದ್ದಕ್ಕೊಂದು ಕಾರಣವಿದೆ. ನಟ ರಿಷಿ ಕಥೆಗಳ ಆಯ್ಕೆ ವಿಚಾರದಲ್ಲಿ ತುಂಬಾನೇ ಚೂಸಿ. ಸಲೀಸಾಗಿ, ಯಾವುದೇ ಮುಲಾಜಿಗೆ ಬಿದ್ದು ಅವರು ಯಾವ ಸಿನಿಮಾಗಳನ್ನೂ ಒಪ್ಪಿಕೊಳ್ಳುವವರಲ್ಲ.
Advertisement
ಅಂಥಾ ರಿಷಿ ಒಪ್ಪಿಕೊಂಡಿದ್ದಾರೆಂದ ಮೇಲೆ ನಂದೀಶ್ ಸಿದ್ಧಪಡಿಸಿದ್ದ ಕಥೆಗೆ ಬೇರ್‍ಯಾವ ವಿಮರ್ಶೆಗಳೂ ಬೇಕಿಲ್ಲ ಎಂಬಂಥಾ ನಂಬಿಕೆ ಲೋಹಿತ್ ಅವರಲ್ಲಿತ್ತು. ಹಾಗೆ ಒಪ್ಪಿಕೊಂಡು ನಿರ್ಮಾಣಕ್ಕಿಳಿದ ಲೋಹಿತ್ ಅವರ ಪಾಲಿಗೀಗ ಚೆಂದದ ಚಿತ್ರವೊಂದನ್ನು ರೂಪಿಸಿದ ಖುಷಿ ಇದೆ. ಆರಂಭದಿಂದ ಇಲ್ಲಿಯವರೆಗೂ ಈ ಪ್ರಕ್ರಿಯೆ ಅವರಿಗೆ ಒಂದಷ್ಟು ಒಳ್ಳೆ ಅನುಭವಗಳನ್ನು ಕಟ್ಟಿಕೊಟ್ಟಿದೆ. ಯಾವುದಕ್ಕೂ ಕಡಿಮೆ ಮಾಡದಂತೆ ರುದ್ರ ಗರುಡ ಪುರಾಣವನ್ನು ನಿರ್ಮಾಣ ಮಾಡಿರುವ ಅವರ ಪಾಲಿಗೆ ಈ ಸಿನಿಮಾ ಪ್ರೇಕ್ಷಕರಿಗೆಲ್ಲ ಖಂಡಿತವಾಗಿಯೂ ಇಷ್ಟವಾಗುತ್ತದೆಂಬ ಗಾಢ ನಂಬಿಕೆಯಿದೆ. ಇದನ್ನೂ ಓದಿ: ಬಿಡುಗಡೆಯಾಯ್ತು `ರುದ್ರ ಗರುಡ ಪುರಾಣ’ದ ನಶೆಯೇರಿಸೋ ಸಾಂಗು!
Advertisement
ಇದೊಂದು ಮಿಸ್ಟ್ರಿ ಥ್ರಿಲ್ಲರ್ ಬಗೆಯ ಸಿನಿಮಾ. ಒಂದು ಘಟನೆಯ ಬಗ್ಗೆ ತನಿಖೆಗಿಳಿಯುತ್ತಾ, ಪ್ರೇಕ್ಷಕರೆದುರು ಹೊಸ ಜಗತ್ತೊಂದು ತೆರೆದುಕೊಂಡು ಹೋಗುವಂತೆ ಈ ಚಿತ್ರವನ್ನು ರೂಪಿಸಲಾಗಿದೆಯಂತೆ. ಈಗಿರುವ ಕ್ರೇಜ್ ಅನ್ನು ಆಧರಿಸಿ ಹೇಳೋದಾದರೆ, ರುದ್ರ ಗರುಡ ಪುರಾಣ ಈ ವರ್ಷದ ಆರಂಭವನ್ನು ಗೆಲುವಿನ ಮೂಲಕ ಕಳೆಗಟ್ಟಿಸುವ ಲಕ್ಷಣಗಳು ಕಾಣಿಸಲಾರಂಭಿಸಿವೆ. ವಿನೋದ್ ಆಳ್ವಾ, ಅವಿನಾಶ್, ಶಿವರಾಜ್ ಕೆ.ಆರ್ ಪೇಟೆ, ಗಿರೀಶ್ ಶಿವಣ್ಣ ಮುಂತಾದವರು ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸಂದೀಪ್ ಕುಮಾರ್ ಛಾಯಾಗ್ರಹಣ, ಮನು ಶೇಡ್ಗಾರ್ ಸಂಕಲನ, ಕೃಷ್ಣ ಪ್ರಸಾದ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ.