ಉಡುಪಿ: ದೇಶದ ನಾಗರಿಕ ಸೇವೆಯಾದ ಐಎಎಸ್ ಮತ್ತು ಐಪಿಎಸ್ ನಲ್ಲಿ 4,000 RSS ಕಾರ್ಯಕರ್ತರು ಇದ್ದಾರೆ. ದೇಶದಲ್ಲಿ ಅಧಿಕಾರ ನಡೆಸುತ್ತಿರುವುದು RSS ಎಂದಿರುವ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆಗೆ ಇಂಧನ ಸಚಿವ ಸುನಿಲ್ ಕುಮಾರ್ ತಿರುಗೇಟು ನೀಡಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ, ಬರೀ 4 ಸಾವಿರ ಅಲ್ಲ ಪಂಚಾಯತ್ ಪಿಡಿಒನಿಂದ ರಾಷ್ಟ್ರಪತಿ ತನಕ RSS ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ನೀವು ಹೇಳಿದ್ರಿ ಅಂತ ಈ ಕೆಲಸ ನಿಲ್ಲೋದಿಲ್ಲ, ಇನ್ನಷ್ಟು ವೇಗ ಪಡೆದುಕೊಳ್ಳುತ್ತದೆ ಎಂದು ಹೇಳಿದರು. ಇದನ್ನೂ ಓದಿ: RSS ಜಾತಿ, ಧರ್ಮ ಮೀರಿದ ಮಾತೃಹೃದಯಿ ಸಂಘಟನೆ: ಜಗ್ಗೇಶ್
ಕೇವಲ 4000 ಅಲ್ಲ ಅದಕ್ಕೂ ಹೆಚ್ಚು ಜನ RSSನವರಿದ್ದಾರೆ. RSS ಒಂದು ವ್ಯಕ್ತಿಯನ್ನು ನಿರ್ಮಾಣ ಮಾಡುವ ಸಂಘಟನೆ. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಮಾಡುವ ಕಲ್ಪನೆ ಇರುವ ಸಂಸ್ಥೆ RSS. ರಾಷ್ಟ್ರ ನಿರ್ಮಾಣದ ಕಲ್ಪನೆ ಇಲ್ಲದವರು ಮಾತ್ರ RSS ಅನ್ನು ವಿರೋಧಿಸುತ್ತಾರೆ. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಭಾರತ ವಿಶ್ವಕ್ಕೆ ಮಾದರಿಯಾಗಬೇಕು ಎಂದಿದ್ದರು. ಅದನ್ನು ಪ್ರಧಾನಿ ಮೋದಿ ಮಾಡುತ್ತಿದ್ದಾರೆ. ನಮ್ಮಂಥ ಅನೇಕ ವ್ಯಕ್ತಿಗಳನ್ನು RSS ತಯಾರು ಮಾಡಿದೆ. ವ್ಯಕ್ತಿತ್ವ ನಿರ್ಮಾಣ ಮಾಡಿಕೊಂಡವರು ಬೇರೆಬೇರೆ ಕ್ಷೇತ್ರದಲ್ಲಿದ್ದಾರೆ. ಸಾವಿರಾರು ಮಂದಿ ವಿವಿಧ ಕ್ಷೇತ್ರಗಳಲ್ಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಷ್ಟ್ರೀಯತೆಯ ಚಿಂತನೆಯನ್ನು ಬೆಳೆಸಿಕೊಂಡರೆ ಎಚ್‍ಡಿಕೆಗೆ ಹೊಟ್ಟೆ ಉರಿ ಯಾಕೆ: ಸೂಲಿಬೆಲೆ ಪ್ರಶ್ನೆ
ಪಿಡಿಒ ನಿಂದ ರಾಷ್ಟ್ರಪತಿ ವರೆಗೆ RSS ಕಾರ್ಯಕರ್ತರು ಇದ್ದಾರೆ. ಎಲ್ಲರ ಮುಖಾಂತರ ರಾಷ್ಟ್ರ ನಿರ್ಮಾಣ ಮಾಡುವ ಗುರಿ ಆ ಸಂಸ್ಥೆಗೆ ಇದೆ. ರಾಷ್ಟ್ರ ನಿರ್ಮಾಣದ ಪರ ಇರುವವರು ಇದನ್ನು ಸ್ವಾಗತಿಸುತ್ತಾರೆ. ರಾಷ್ಟ್ರ ನಿರ್ಮಾಣದ ಕನಸು ಇಲ್ಲದವರು ವಿರೋಧಿಸುತ್ತಾರೆ. ಈ ರೀತಿ ಮಾತನಾಡುವವರ ಬಗ್ಗೆ ಅನುಕಂಪವಿದೆ. ಭಾರತ ವಿಶ್ವಕ್ಕೆ ಮಾರ್ಗದರ್ಶನ ಮಾಡಬೇಕೆಂದು ಕಲಾಂ ಬಯಸಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಆ ಸಾಧನೆ ಮಾಡುತ್ತಿದ್ದಾರೆ. ಅವರೂ RSS ಕಾರ್ಯಕರ್ತ. ಭಾರತ ನಂಬರ್ 1 ಆಗಲು ವ್ಯಕ್ತಿ ನಿರ್ಮಾಣವಾಗಬೇಕು ಎಂದು ಸುನೀಲ್ ಕುಮಾರ್ ಹೇಳಿದರು. ಇದನ್ನೂ ಓದಿ: RSS ನ 4 ಸಾವಿರ ಐಎಎಸ್, ಐಪಿಎಸ್ ಅಧಿಕಾರಿಗಳಿದ್ದಾರೆ- ಬಿಜೆಪಿ ವಿರುದ್ಧ ಎಚ್‍ಡಿಕೆ ವಾಗ್ದಾಳಿ
ವ್ಯಕ್ತಿ ನಿರ್ಮಾಣ ಮಾಡುವ ಏಕೈಕ ಸಂಘಟನೆ RSS. ಅಪ್ಪ ಮಕ್ಕಳು ಬೇರೆ ಬೇರೆ ಸಂದರ್ಭದಲ್ಲಿ ಬೇರೆ-ಬೇರೆ ರೀತಿ ಮಾತನಾಡುತ್ತಾರೆ. RSS ಹೆಸರನ್ನು ಬೇಕಾದಂತೆ ಬಳಸಿಕೊಂಡಿದ್ದಾರೆ. ಅವರಿಗೆ ಬೇಕಾದಂತೆ ಬಳಸಿಕೊಳ್ಳುವ ಸಂಘಟನೆ RSS ಅಲ್ಲ. ಕುಮಾರಸ್ವಾಮಿ ಹೇಳಿದರು ಅಂತ ಈ ಕೆಲಸ ನಿಲ್ಲೋದಿಲ್ಲ. ಈ ಕೆಲಸ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ ಎಂದು ಕುಮಾರಸ್ವಾಮಿ ಗೆ ಸುನೀಲ್ ಕುಮಾರ್ ತಿರುಗೇಟು ಕೊಟ್ಟರು. ಇದನ್ನೂ ಓದಿ: RSS ಹುಟ್ಟಿದಾಗಿಂದ್ಲೂ ಏನೆಲ್ಲ ಮಾಡ್ಕೊಂಡು ಬಂದಿದೆ ಅನ್ನೋದು ಜಗತ್ತಿಗೆ ಗೊತ್ತಿದೆ: ಎಚ್‍ಡಿಕೆ