ಬೆಂಗಳೂರು: ರಾಮನಗರದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತರ ಪಥ ಸಂಚಲನ ಈಗ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ. ಆರ್.ಎಸ್.ಎಸ್. ಪಥ ಸಂಚಲನಕ್ಕೆ ಕನಕಪುರದ ಡಿಕೆ ಬ್ರದರ್ಸ್ ಸೈಲೆಂಟ್ ಆಗಿಯೇ ಬಿಜೆಪಿ ಮತ್ತು ಆರ್.ಎಸ್.ಎಸ್. ಗೆ ತಿರುಗೇಟು ಕೊಟ್ಟು ಸವಾಲ್ ಹಾಕಿದ್ದಾರೆ. ಯಾರೇ ಪಥ ಸಂಚಲನ ಮಾಡಲಿ ನಮ್ಮ ಅಭ್ಯಂತರ ಇಲ್ಲ. ಶಾಂತಿ ಕದಡುವ ಕೆಲಸ ಮಾಡಿದ್ರೆ ಹುಷಾರ್ ಅಂತ ಡಿಕೆ ಬ್ರದರ್ಸ್ ಎಚ್ಚರಿಕೆ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಸಂಸದ ಡಿಕೆ ಸುರೇಶ್ ಆರ್‍ಎಸ್‍ಎಸ್ ನಾಯಕರಿಗೆ ಎಚ್ಚರಿಕೆ ಕೊಟ್ಟು ಸವಾಲ್ ಹಾಕಿದ್ದಾರೆ. ಆರ್.ಎಸ್.ಎಸ್. ನವರು ಪಥ ಸಂಚಲನ ಮಾಡೋದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದ್ರೆ ಶಾಂತಿಯುವಾಗಿ ಪಥ ಸಂಚಲನೆ ಮಾಡಬೇಕು. ಶಾಂತಿ ಕದಡುವ ಕೆಲಸ ಮಾಡಿದ್ರೆ ನಾವು ಸುಮ್ಮನೆ ಇರೋದಿಲ್ಲ. ಯಾರೇ ಪಥ ಸಂಚಲನ ಮಾಡಲಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಂತಿ ಭಂಗ ತರೋ ಕೆಲಸ ಮಾಡಬಾರದು. ಪ್ರಚೋದನಕಾರಿಯಾಗಿ ಮಾತಾಡಿ ಮತವಿಭಜನೆ ಮಾಡೋ ಕೆಲಸ ಮಾಡಬಾರದು. ಹಾಗೇನಾದ್ರು ಮಾಡಿದ್ರೆ ನಾವು ಸಕ್ರಿಯವಾಗಿ ಹೋರಾಟ ಮಾಡ್ತೀವಿ ಅಂತ ಎಚ್ಚರಿಕೆ ಕೊಟ್ಟರು.
ಇನ್ನು ಕಲ್ಲಡ್ಕ ಪ್ರಭಾಕರ್ ಭಟ್ಟರು ಬಿಜೆಪಿ ನೆಲೆಸಲು ಈ ಪಥ ಸಂಚಲನ ಮಾಡ್ತಿದ್ದಾರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು, ಕಲ್ಲಡ್ಕ ಪ್ರಭಾಕರ್ ಭಟ್ ಯಾರು ಅಂತಾನೇ ನನಗೆ ಗೊತ್ತಿಲ್ಲ. ತಲೆ ಕೆಟ್ಟವರು ಮೊನ್ನೆ ಯಡಿಯೂರಪ್ಪ ಬಗ್ಗೆ ಏನೋ ಮಾತಾಡಿದ್ರು. ಇನ್ನೊಬ್ಬರ ಬಗ್ಗೆ ಇನ್ನೇನೋ ಹೇಳುತ್ತಾರೆ. ಅವರಿಗೆಲ್ಲ ಯಾರು ಉತ್ತರ ಕೊಡ್ತಾರೆ. ಕಾಲವೇ ಎಲ್ಲದ್ದಕ್ಕೂ ಉತ್ತರ ಕೊಡುತ್ತೆ ಅಂತ ಕಿಡಿಕಾರಿದರು.
ಇನ್ನು ಮಾಜಿ ಸಚಿವ ಡಿಕೆ ಶಿವಕುಮಾರ್ ಮಾತನಾಡಿ, ಆರ್.ಎಸ್.ಎಸ್ ನವರು ಚೆಡ್ಡಿ ಹಾಕಿಕೊಂಡು ಬೇಕಾದ್ರು ಪಥ ಸಂಚಲನ ಮಾಡಲಿ. ಪ್ಯಾಂಟ್ ಹಾಕಿಕೊಂಡು ಬೇಕಾದ್ರು ಮಾಡಲಿ. ಇಲ್ಲವೆ ಉರುಳು ಸೇವೆ ಬೇಕಾದ್ರು ಮಾಡಲಿ. ನಮ್ಮ ಅಭ್ಯಂತರ ಇಲ್ಲ ಅಂತ ಲೇವಡಿ ಮಾಡಿದರು. ನನ್ನ ತಮ್ಮ ಗೆದ್ದಿರೋದು ಪಾಪ ಬಿಜೆಪಿ ಅವ್ರಿಗೆ ಇಷ್ಟ ಇಲ್ಲ. ಹೇಗಾದ್ರು ಮಾಡಿ ಆತನಿಗೆ ತೊಂದರೆ ಕೊಡಬೇಕು ಅಂತ ಬಿಜೆಪಿ ಅವರು ಆರ್.ಎಸ್‍ಎಸ್. ಮೂಲಕ ಹೀಗೆಲ್ಲ ಮಾಡಿಸುತ್ತಿದ್ದಾರೆ. ಧರ್ಮದ ಹೆಸರಲ್ಲಿ ರಾಜಕೀಯ ಮಾಡ್ತಿದ್ದಾರೆ. ಇದಕ್ಕೆಲ್ಲ ನಾವು ಹೆದರಲ್ಲ. ಇದನ್ನ ಎದರಿಸೋ ಶಕ್ತಿ ನಮಗೆ ಇದೆ ಅಂತ ಕಿಡಿಕಾರಿದರು.