ಬೆಳಗಾವಿ: `ಆಪರೇಷನ್ ಸಿಂಧೂರ’ದ (Operation Sindoor) ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ (Colonel Sofia Qureshi) ಪತಿ ಮನೆ ಮೇಲೆ ಆರ್‌ಎಸ್‌ಎಸ್ (RSS) ದಾಳಿ ನಡೆಸಿದೆ ಎಂಬ ವದಂತಿ ಬೆನ್ನಲ್ಲೇ ಸುಳ್ಳು ಸುದ್ದಿ ನಂಬದಂತೆ ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ ಗುಳೇದ್ (Dr. Bheemashankar S. Guled) ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಬೆಳಗಾವಿ ಎಸ್ಪಿ ಡಾ.ಭೀಮಾಶಂಕರ್ ಗುಳೇದ ಮಾಧ್ಯಮದವರೊಂದಿಗೆ ಮಾತನಾಡಿ, ಎಕ್ಸ್ (X) ಖಾತೆಯಲ್ಲಿ ಕರ್ನಲ್ ಸೋಫಿಯಾ ಪತಿ ಮನೆಯ ಮೇಲೆ ಆರ್‌ಎಸ್‌ಎಸ್ ಬೆಂಬಲಿತ ಹಿಂದೂಗಳು ದಾಳಿ ಮಾಡಿ, ಮನೆ ದ್ವಂಸ ಮಾಡಿದ್ದಾರೆ ಎಂದು ಸುಳ್ಳು ಪೋಸ್ಟ್ ಹಾಕಲಾಗಿತ್ತು. ಅನೀಸ್ ಉದ್ದಿನ್ ಎಂಬಾತ ಎಕ್ಸ್ ಖಾತೆಯಲ್ಲಿ ಸುಳ್ಳು ಸುದ್ದಿ ಹಾಕಿಕೊಂಡಿದ್ದ. ಪೋಸ್ಟ್ನಲ್ಲಿ ಕರ್ನಲ್ ಸೋಫಿಯಾ ಅವರ ಫೋಟೋ ಹಾಗೂ ಮನೆಯನ್ನು ಧ್ವಂಸ ಮಾಡಿರುವ ಯಾವುದೋ ಒಂದು ಹಳೆಯ ಫೋಟೋವನ್ನು ಹಾಕಿ ಹಂಚಿಕೊಳ್ಳಲಾಗಿತ್ತು. ಈ ವಿಚಾರವಾಗಿ ಜಿಲ್ಲಾ ಸಾಮಾಜಿಕ ಮಾಧ್ಯಮ ಮಾನಿಟರಿಂಗ್ ಟೀಂ ನಮ್ಮ ಗಮನಕ್ಕೆ ತಂದಿತ್ತು. ನಾನು ಅದಕ್ಕೆ ಇದು ಸುಳ್ಳು ಸುದ್ದಿ ಎಂದು ಕಾಮೆಂಟ್ ಮಾಡಿದೆ. ತಕ್ಷಣ ಆ ವ್ಯಕ್ತಿ ಅದನ್ನು ಡಿಲೀಟ್ ಮಾಡಿದ್ದಾನೆ. ಕೂಡಲೇ ನಾವು ಸೋಫಿಯಾ ಖುರೇಷಿ ಅವರ ಪತಿ ಮನೆಗೆ ನಮ್ಮ ಪೊಲೀಸರನ್ನು ಕಳಿಸಿದ್ದೆವು, ಯಾವುದೇ ದಾಳಿ ನಡೆದಿಲ್ಲ ಎನ್ನುವುದು ಗೊತ್ತಾಗಿದೆ. ಆದರೂ ಸದ್ಯ ಸುರಕ್ಷತಾ ದೃಷ್ಟಿಯಿಂದ ಪೊಲೀಸರು ಸೋಫಿಯಾ ಪತಿ ಮನೆಗೆ ಭದ್ರತೆ ಒದಗಿಸಿದ್ದಾರೆ. ಜೊತೆಗೆ ಪೊಲೀಸರ ಗಮನಕ್ಕೆ ಬರುತ್ತಿದ್ದಂತೆ ಆ ವ್ಯಕ್ತಿ ಎಕ್ಸ್ ಖಾತೆಯಿಂದ ಪೋಸ್ಟ್ ಡಿಲೀಟ್ ಮಾಡಿದ್ದಾನೆ ಎಂದು ತಿಳಿಸಿದರು.ಇದನ್ನು ಓದಿ: ಭಾರತಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು – ಪಾಕ್ ಬಂಧಿಸಿದ್ದ ಬಿಎಸ್‌ಎಫ್ ಯೋಧ ತಾಯ್ನಾಡಿಗೆ ವಾಪಸ್
ಪೋಸ್ಟ್ ಮಾಡಿದ ವ್ಯಕ್ತಿ ಕೆನಡಾ ಮೂಲದವನು ಎಂದು ಗೊತ್ತಾಗಿದೆ. ಹೊರದೇಶದವನು ಎಂದು ಗೊತ್ತಾಗಿದ್ದಕ್ಕೆ ಎಫ್‌ಐಆರ್ (FIR) ಮಾಡಿಕೊಂಡಿಲ್ಲ. ಎಕ್ಸ್ ಲೀಗಲ್ ಟೀಂನಿಂದ ಮಾಹಿತಿ ಪಡೆಯುತ್ತಿದ್ದೇವೆ. ಒಂದು ವೇಳೆ ಆತ ಭಾರತದವನು ಎಂದು ಗೊತ್ತಾದರೆ ಎಫ್‌ಐಆರ್ ಮಾಡಿಕೊಳ್ಳುತ್ತೇವೆ. ಅವಶ್ಯಕತೆ ಬಿದ್ದರೆ ಅವನನ್ನು ಅರೆಸ್ಟ್ ಕೂಡ ಮಾಡುತ್ತೇವೆ. ಒಂದು ಕಮ್ಯೂನಿಟಿಯಿಂದ ಮತ್ತೊಂದು ಕಮ್ಯುನಿಟಿಗೆ ದ್ವೇಷ ಬಿತ್ತುವ ಕೆಲಸ ಮಾಡಬಾರದು. ಹಾಗೆ ಮಾಡಿದರೆ ಅಂತವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳುತ್ತೇವೆ ಎಂದರು.
ಸದ್ಯ ಸೈಬರ್ ಪೊಲೀಸ್ ಠಾಣೆಯ ಡಿವೈಎಸ್‌ಪಿಯವರ ನೇತೃತ್ವದಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ಕಣ್ಣಿಡಲಾಗಿದೆ. ಬೀಟ್ ಹಂತದಲ್ಲೂ ಸಹ ಅದನ್ನು ಅಬ್ಸರವೇಷನ್ ಮಾಡಲಾಗುತ್ತಿದೆ. ಕಿಡಿಗೇಡಿಗಳು ಗುಂಪು ಘರ್ಷಣೆಗೆ ಕಾರಣವಾದರೆ ಅಂತಹವರ ವಿರುದ್ಧ ಕಾನೂನು ಕ್ರಮವನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.ಇದನ್ನು ಓದಿ: ನಮಗೆ ಯಾರಾದ್ರು ತೊಂದರೆ ಕೊಟ್ಟರೆ, ಸುಮ್ಮನೆ ಬಿಡಲ್ಲ: ಪಾಕ್ ವಿರುದ್ಧ ಗುಡುಗಿದ ಯೋಗಿ ಆದಿತ್ಯನಾಥ್