ಬೆಂಗಳೂರು: 10 ರೂ. ಬೀಡಾ ತಿನ್ನಲು ಸ್ಕೂಟರ್ ನಿಲ್ಲಿಸಿದ್ದ ವೇಳೆ ಉದ್ಯಮಿಯೊಬ್ಬರು 5 ಲಕ್ಷ ರೂಪಾಯಿಯನ್ನು ಕಳೆದುಕೊಂಡ ಘಟನೆ ನಗರದ ಆರ್ ಬಿಐ ಲೇಔಟ್‍ನ ಬ್ರೀಗೆಡ್ ಜಂಕ್ಷನ್ ಬಳಿ ನಡೆದಿದೆ.
ಸುಧಾಕರ್ ನಾಯ್ಡು ಹಣ ಕಳೆದುಕೊಂಡ ರಿಯಲ್ ಎಸ್ಟೇಟ್ ಉದ್ಯಮಿ. ಸೋಮವಾರ ಮಧ್ಯಾಹ್ನ ಸುಧಾಕರ್ ತಮ್ಮ ಬಾವನ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆ ಖರ್ಚಿಗಾಗಿ ಪುಟ್ಟೇನಳ್ಳಿಯ ಆಂಧ್ರ ಬ್ಯಾಂಕ್ ನಿಂದ 5 ಲಕ್ಷ ರೂ. ಹಣ ಡ್ರಾ ಮಾಡಿದ್ದರು. ಡ್ರಾ ಮಾಡಿದ್ದ ಹಣವನ್ನು ಚೀಲದಲ್ಲಿ ಹಾಕಿ ತಮ್ಮ ಸ್ಕೂಟರಿನ ಡಿಕ್ಕಿಯಲ್ಲಿ ಹಾಕಿದ್ದರು. ಈ ವೇಳೆ ಆರ್ ಬಿಐ ಬ್ರೀಗೆಡ್ ಬಳಿಯಿರುವ ಜಂಕ್ಷನ್ ನಲ್ಲಿ ಸ್ಕೂಟರ್ ನಿಲ್ಲಿಸಿ ಬೀಡಾ ತಿನ್ನಲು ಹೋದಾಗ, ಬೈಕಿನಲ್ಲಿ ಬಂದ ಇಬ್ಬರು ಕಳ್ಳರು ಸ್ಕೂಟರಿನ ಡಿಕ್ಕಿಯನ್ನು ಒಡೆದು ಹಣ ದೋಚಿಕೊಂಡು ಪರಾರಿಯಾಗಿದ್ದಾರೆ.
ಹಣ ಕಳ್ಳತನವಾದ ವಿಷಯ ತಿಳಿದ ಕೂಡಲೇ ಸುಧಾಕರ್ ರವರು ಕೋಣನಕುಂಟೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಹತ್ತಿರದ ಸಿಸಿಟಿವಿಯನ್ನು ಪರೀಕ್ಷಿಸಿದಾಗ ಕಳ್ಳರ ಕೈಚಳಕ ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡು, ಕಳ್ಳರಿಗಾಗಿ ವ್ಯಾಪಕ ಶೋಧ ನಡೆಸಿದ್ದಾರೆ.
ಏನಿದು ಘಟನೆ?
ಸುಧಾಕರ್ ಅವರು ಹಣವನ್ನು ಡ್ರಾ ಮಾಡಿ, ಸ್ಕೂಟರಿನಲ್ಲಿಟ್ಟಿದ್ದನ್ನು ಗಮನಿಸಿದ ದುಷ್ಕರ್ಮಿಗಳು, ಅವರನ್ನು ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದಾರೆ. ಈ ವೇಳೆ ಅವರು ಬ್ರೀಗೆಡ್ ಜಂಕ್ಷನ್ ಬಳಿ ಗಾಡಿ ನಿಲ್ಲಿಸಿ, ಬೀಡಾ ತಿನ್ನಲು ಹೋಗಿದ್ದರು. ಮೊದಲೇ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು, ಸ್ಕ್ರೂ ಡ್ರೈವರ್ ಬಳಸಿ ಸ್ಕೂಟರಿನ ಡಿಕ್ಕಿ ತೆರೆದು ಹಣ ಎತ್ತಿಕೊಂಡು ಪರಾರಿಯಾಗಿದ್ದಾರೆ.
https://www.youtube.com/watch?v=Pg0pQYdNbw8