ಪಣಜಿ: ಮಹಾರಾಷ್ಟ್ರ ಆಯ್ತು, ಈಗ ಗೋವಾದಲ್ಲೂ ಆಪರೇಷನ್ ಕಮಲಕ್ಕೆ ಬಿಜೆಪಿ ಮುಂದಾಗಿದೆ ಎಂಬ ಆರೋಪ ಕೇಳಿಬಂದಿವೆ.
ಗೋವಾದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕಾಂಗ್ರೆಸ್ ಶಾಸಕರನ್ನು ಬಿಜೆಪಿ ಸೆಳೆಯುತ್ತಿದೆ. 8 ಕಾಂಗ್ರೆಸ್ ಶಾಸಕರಿಗೆ ಬಿಜೆಪಿ ತಲಾ 40 ಕೋಟಿ ಆಫರ್ ಮಾಡಿದೆ ಎಂದು ಗೋವಾ ಕಾಂಗ್ರೆಸ್ ಮುಖಂಡ ಗಿರೀಶ್ ಚೋಡನ್‍ಕರ್ ಗಂಭೀರ ಆರೋಪ ಮಾಡಿದ್ದಾರೆ. ಇದನ್ನೂ ಓದಿ: 6 ರಿಂದ 10 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆ?
ಬಿಜೆಪಿ ನಾಯಕರ ಪರವಾಗಿ ಉದ್ಯಮಿಗಳು ಮತ್ತು ಗಣಿ ಮಾಫಿಯಾದ ಮಂದಿ ಕಾಂಗ್ರೆಸ್ ಶಾಸಕರಿಗೆ ಕರೆ ಮಾಡುತ್ತಿದ್ದಾರೆ ಎಂದು ಚೋಡನ್‍ಕರ್ ಆರೋಪ ಮಾಡಿದ್ದಾರೆ. ಆದರೆ ಈ ಆರೋಪಗಳನ್ನು ಬಿಜೆಪಿ ತಳ್ಳಿ ಹಾಕಿದೆ. ಇದು ಆಧಾರರಹಿತ ಆರೋಪ ಎಂದಿದೆ. ಶನಿವಾರ ರಾತ್ರಿಯಷ್ಟೇ ಗೋವಾ ಮುಖ್ಯಮಂತ್ರಿಗಳನ್ನು ಕಾಂಗ್ರೆಸ್ ಶಾಸಕರ ನಿಯೋಗ ಭೇಟಿ ಮಾಡಿತ್ತು. ಮಾಜಿ ಸಿಎಂ ದಿಗಂಬರ್ ಕಾಮತ್, ವಿಪಕ್ಷ ನಾಯಕ ಮೈಕಲ್ ಲೋಬೋ ಸೇರಿ ಒಟ್ಟು 8 ಶಾಸಕರು ಬಿಜೆಪಿ ಸೇರಲು ಸಜ್ಜಾಗಿದ್ದಾರೆ ಎನ್ನಲಾಗಿದೆ.
ಉಸ್ತುವಾರಿ ದಿನೇಶ್ ಗುಂಡೂರಾವ್ ಪಣಜಿಗೆ ದೌಡಾಯಿಸಿ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಈ ಗೊಂದಲಗಳ ನಡುವೆ ಇಂದಿನಿಂದ ಗೋವಾ ವಿಧಾನಸಭೆ ಅಧಿವೇಶನ ಆರಂಭಗೊಳ್ಳಲಿದೆ. ನಾಳೆ ನಡೆಯಬೇಕಿದ್ದ ಡೆಪ್ಯೂಟಿ ಸ್ಪೀಕರ್ ಚುನಾವಣೆಗೆ ನಿಗದಿಯಾಗಿದ್ದ ಚುನಾವಣೆಯನ್ನು ಗೋವಾ ಸ್ಪೀಕರ್ ರದ್ದು ಮಾಡಿದ್ದಾರೆ. ಒಂದೊಮ್ಮೆ ಕಾಂಗ್ರೆಸ್‍ನ 8 ಶಾಸಕರು ಬಿಜೆಪಿ ಸೇರಿದಲ್ಲಿ, ಕಾಂಗ್ರೆಸ್ ಪಕ್ಷದಲ್ಲಿ ಕೇವಲ ಮೂವರು ಶಾಸಕರು ಉಳಿಯಲಿದ್ದಾರೆ.
8 ಶಾಸಕರು ಕಾಂಗ್ರೆಸ್ ತೊರೆದಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಕೂಡ ಅವರಿಗೆ ಅನ್ವಯವಾಗುವುದಿಲ್ಲ. ಅಂದ ಹಾಗೇ ಚುನಾವಣೆಗೆ ಮುಂಚೆ, ಕಾಂಗ್ರೆಸ್ ಅಭ್ಯರ್ಥಿಗಳಿಂದ ಪಕ್ಷ ನಿಷ್ಠೆಯ ಪ್ರಮಾಣವನ್ನು ದಿನೇಶ್ ಗುಂಡೂರಾವ್ ಮಾಡಿಸಿದ್ರು. ಅತ್ತ ಹರಿಯಾಣದ ಕಾಂಗ್ರೆಸ್ ಮುಖಂಡ ಕುಲದೀಪ್ ಬಿಷ್ಣೋಯ್ ನಿನ್ನೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಭೇಟಿ ಮಾಡಿರೋದು ಕೂಡ ನಾನಾ ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ.