ನವದೆಹಲಿ: ಜೈಲಿನಲ್ಲಿರುವ ದರೋಡೆಕೋರ ಲಾರೆನ್ಸ್ ಬಿಷ್ಣೋಯ್‌ನನ್ನು (Lawrence Bishnoi) ಹತ್ಯೆ ಮಾಡಿದ್ರೆ 1,11,11,111 ನಗದು ಬಹುಮಾನವನ್ನು ನೀಡುವುದಾಗಿ ಕ್ಷತ್ರಿಯ ಕರ್ಣಿ ಸೇನೆ (Karni Sena) ಘೋಷಣೆ ಮಾಡಿದೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸದಸ್ಯರಿಂದ ಹತ್ಯೆಗೀಡಾದ ಪ್ರಮುಖ ರಜಪೂತ್ ನಾಯಕ ಸುಖದೇವ್ ಸಿಂಗ್ ಗೊಗಮೆಡಿ ಅವರ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಕ್ಷತ್ರಿಯ ಕರ್ಣಿ ಸೇನೆಯ ನಾಯಕ ರಾಜ್ ಶೇಖಾವತ್ ಈ ಬಹುಮಾನವನ್ನು ಘೋಷಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಹಂಚಿಕೊಂಡಿರುವ ರಾಜ್ ಶೇಖಾವತ್ (Raj Shekhawat), ಜೈಲಿನಲ್ಲಿರುವ ದರೋಡೆಕೋರನನ್ನು ಕೊಂದ ಯಾವುದೇ ಪೊಲೀಸ್ ಅಧಿಕಾರಿಗೆ ಬಹುಮಾನವನ್ನು ನೀಡುತ್ತೇನೆ ಎಂದು ಹೇಳಿಕೊಂಡಿದ್ದಾರೆ.
ಗಡಿಯಾಚೆಗಿನ ಮಾದಕವಸ್ತು ಕಳ್ಳಸಾಗಣೆ ಆರೋಪದಡಿ ಬಿಷ್ಣೋಯಿ ಪ್ರಸ್ತುತ ಗುಜರಾತ್‌ನ ಸಬರಮತಿ ಜೈಲಿನಲ್ಲಿದ್ದಾನೆ. ಇತ್ತೀಚೆಗೆ, ಬಿಷ್ಣೋಯ್ ಗ್ಯಾಂಗ್ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕಿ ಅವರ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದೆ. ಅಲ್ಲದೇ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ನಿವಾಸದ ಹೊರಗೆ ನಡೆದ ಗುಂಡಿನ ದಾಳಿಗೆ ಬಿಷ್ಣೋಯ್ ಗ್ಯಾಂಗ್‌ಗೂ ಸಂಬಂಧ ಇರುವುದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಗೊಗಮೆಡಿ ಅವರ ಜೈಪುರದ ನಿವಾಸದಲ್ಲಿ ಚಹಾ ಕುಡಿಯುತ್ತಿದ್ದ ವೇಳೆ ಗುಂಡಿಕ್ಕಿ ಹತ್ಯೆಗೈಯ್ಯಲಾಗಿತ್ತು. ಭದ್ರತಾ ಸಿಬ್ಬಂದಿ ಸಹ ಈ ವೇಳೆ ತೀವ್ರವಾಗಿ ಗಾಯಗೊಂಡಿದ್ದರು. ಗುಂಡಿನ ಚಕಮಕಿಯಲ್ಲಿ ಶೂಟರ್‌ಗಳಲ್ಲಿ ಒಬ್ಬನಾದ ನವೀನ್ ಸಿಂಗ್ ಶೇಖಾವತ್ ಕೂಡ ಸಾವನ್ನಪ್ಪಿದ್ದ.
ದಾಳಿಯ ಸ್ವಲ್ಪ ಸಮಯದ ನಂತರ, ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಗ್ಯಾಂಗ್‌ಗಳ ಸಹವರ್ತಿ ರೋಹಿತ್ ಗೋಡಾರಾ, ಗೊಗಮೆಡಿ ಅವರ ಹತ್ಯೆಯ ಹೊಣೆಗಾರಿಕೆಯನ್ನು ಹೊತ್ತುಕೊಂಡಿದ್ದ. ಸಾಮಾಜಿಕ ಜಾಲತಾಣದಲ್ಲಿ ನಮ್ಮ ಶತೃಗಳನ್ನು ಬೆಂಬಲಿಸಿದ್ದಕ್ಕಾಗಿ ಹತ್ಯೆ ಮಾಡಿದ್ದಾರೆ ರೋಹಿತ್ ಹೇಳಿಕೊಂಡಿದ್ದ.
ಗೊಗಮೇಡಿ ಹತ್ಯೆಯ ಹಿಂದಿನ ಮಾಸ್ಟರ್ ಮೈಂಡ್ ರೋಹಿತ್ ಗೋಡಾರಾ ಇನ್ನೂ ಪತ್ತೆಯಾಗಿಲ್ಲ. ಗುಪ್ತಚರ ವರದಿಗಳ ಪ್ರಕಾರ, ಗೋದಾರಾ ಪವನ್ ಕುಮಾರ್ ಎಂಬ ಹೆಸರಿನಲ್ಲಿ ನಕಲಿ ಪಾಸ್‌ಪೋರ್ಟ್ ಬಳಸಿ ಭಾರತದಿಂದ ಪಲಾಯನ ಮಾಡಿದ್ದಾನೆ. ಕೆನಡಾದಲ್ಲಿ ಎಲ್ಲೋ ಅಡಗಿಕೊಂಡಿದ್ದಾನೆ ಎನ್ನಲಾಗಿದೆ. ಗೋದಾರಾಗೆ ಇಂಟರ್‌ಪೋಲ್ ರೆಡ್ ನೋಟಿಸ್ ಜಾರಿ ಮಾಡಿದೆ. ಸುಲಿಗೆ ಮತ್ತು ಕೊಲೆ ಸೇರಿದಂತೆ ಅವನ ವಿರುದ್ಧ 32 ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿವೆ. ಗೋದಾರಾ ಭಾರತದ ಮೋಸ್ಟ್ ವಾಂಟೆಡ್ ಕ್ರಿಮಿನಲ್‌ಗಳಲ್ಲಿ ಒಬ್ಬ.