ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೊನೆಗೂ ಸರ್ಕಾರ ಅನುದಾನ ಘೋಷಣೆ ಮಾಡಿದೆ. ವಿಧಾನಸಭೆ ಕಲಾಪದಲ್ಲಿಂದು ಸಿಎಂ ಯಡಿಯೂರಪ್ಪ, ಕೃಷ್ಣಾ ಮೇಲ್ದಂಡೆ ಯೋಜನೆಯ ಮೂರನೆ ಹಂತ ಹಾಗೂ ಮೂವತ್ತು ಹಳ್ಳಿಗಳ ಪುನರ್ವಸತಿ ಹಾಗೂ ಪುನರ್ ನಿರ್ಮಾಣಕ್ಕೆ 10 ಸಾವಿರ ಕೋಟಿ ರೂ.ನಿಗದಿಪಡಿಸಲು ನಿರ್ಧರಿಸಲಾಗಿದೆ ಎಂದು ಘೋಷಣೆ ಮಾಡಿದರು.
ನಿನ್ನೆ ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಕೃಷ್ಣ ಮೇಲ್ದಂಡೆ ಯೋಜನೆಯ ಪ್ರಸ್ತಾಪವೇ ಇರಲಿಲ್ಲ. ಇದರಿಂದ ಆ ಭಾಗದ ಜನತೆ ಹಾಗೂ ಪ್ರತಿಪಕ್ಷಗಳಿಂದ ಭಾರೀ ಟೀಕೆಗೆ ವ್ಯಕ್ತವಾಗಿತ್ತು. ಹೀಗಾಗಿ ನಿನ್ನೆಯೇ ಮುಖ್ಯಮಂತ್ರಿಗಳು ಹಣಕಾಸು ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಈ ಕುರಿತು ತೀರ್ಮಾನ ಮಾಡಿದರು.
Advertisement
Advertisement
ವಿಧಾನಸಭೆಯಲ್ಲಿ ಮಾತಾಡಿದ ಯಡಿಯೂರಪ್ಪ, ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ಮೂರು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. ಇಂದು ದೆಹಲಿಗೆ ಹೋಗುತ್ತಿದ್ದೇನೆ. ಕೇಂದ್ರ ಸರ್ಕಾರದ ಪ್ರಮುಖರ ಜತೆ ಮಾತುಕತೆ ನಡೆಸುತ್ತೇನೆ. ಹೇಗಾದರೂ ಸರಿಯೇ ಹೆಚ್ಚುವರಿ ಅನುದಾನ ತರುವ ಪ್ರಯತ್ನ ಮಾಡುತ್ತೇನೆ ಎಂದರು.
Advertisement
ಸಿದ್ದರಾಮಯ್ಯ ಆಕ್ಷೇಪ: ಸಿಎಂ ಹೇಳಿಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸದನದಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ನಿನ್ನೆ ಬಜೆಟ್ ಮಂಡಿಸುವಾಗಲೇ ಅದನ್ನು ಸೇರ್ಪಡೆ ಮಾಡಬಹುದಿತ್ತು. ಹೋಗಲಿ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡುವಾಗ ಹೇಳಬಹುದಿತ್ತು. ಆದರೂ ಈಗಲೇ ಹೇಳಿದ್ದಾರೆ. ಸಂತೋಷ. ಆದರೆ ಹತ್ತು ಸಾವಿರ ಕೋಟಿ ರೂ ಮೀಸಲಿಡುತ್ತೇವೆ ಎಂದಿದ್ದಾರೆ. ಆದರೆ ಹಣ ಎಲ್ಲಿದೆ? ಕೇವಲ ಭರವಸೆ ಆಗಬಾರದು, ನಾನು ಕೂಡ ಬಾಗಲಕೋಟೆ ಜಿಲ್ಲೆಯವನೇ. ಬಾದಾಮಿ ಕ್ಷೇತ್ರವನ್ನು ಪ್ರತಿನಿಧಿಸುವವನೇ ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.