– ಬೆಂಗಳೂರಲ್ಲಿ ಗುಜರಾತ್ ವಿರುದ್ಧ ಇಂದು ಆರ್‌ಸಿಬಿ ಸೆಣಸಾಟ
ಬೆಂಗಳೂರು: ಐಪಿಎಲ್ 2025ರ ಟೂರ್ನಿಯಲ್ಲಿ ತವರಿನಾಚೆ ಆಡಿತ ಎರಡೂ ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿರುವ ಆರ್‌ಸಿಬಿ ಇಂದು ತವರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೊದಲ ಪಂದ್ಯವನ್ನಾಡಲಿದೆ.
ಬುಧವಾರ ಗುಜರಾತ್ ಟೈಟಾನ್ಸ್ ವಿರುದ್ಧ ಸೆಣಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಜ್ಜಾಗಿದೆ. ಹ್ಯಾಟ್ರಿಕ್ ಗೆಲುವಿನ ಮೂಲಕ ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ತವಕದಲ್ಲಿ ಆರ್‌ಸಿಬಿ ಇದೆ.
ಟೂರ್ನಿಯ ಮೊದಲ ಪಂದ್ಯದಲ್ಲೇ ಆರ್‌ಸಿಬಿ ಅಮೋಘ ಪ್ರದರ್ಶನ ನೀಡಿತ್ತು. ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಹಿಡಿತ ಸಾಧಿಸಿರುವ ರಜತ್ ಪಾಟೀದಾರ್ ಪಡೆ ಕೆಕೆಆರ್ ವಿರುದ್ಧ ಗೆದ್ದು ಬೀಗಿತ್ತು. ತವರಲ್ಲೇ ಕೆಕೆಆರ್‌ಗೆ ಪಾದಾರ್ಪಣೆ ಪಂದ್ಯದಲ್ಲಿ ಮುಖಭಂಗವಾಯಿತು.
ಇನ್ನು ಚೆಪಾಕ್‌ನಲ್ಲಿ ನಡೆದ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕ್ಯಾಪ್ಟನ್ ಪಾಟೀದಾರ್ ಜವಾಬ್ದಾರಿಯುತ ಆಡವಾಡಿದ್ದರು. ಬೌಲಿಂಗ್‌ನಲ್ಲಿ ಜೋಶ್ ಹ್ಯಾಜಲ್‌ವುಡ್ ಮಿಂಚಿದ್ದರು. ಇದರಿಂದ ಚೆನ್ನೈ ವಿರುದ್ಧ ಆರ್‌ಸಿಬಿ 17 ವರ್ಷಗಳ ಬಳಿಕ ಐತಿಹಾಸಿಕ ಗೆಲುವು ದಾಖಲಿಸಿತು. ಫಿಲ್ ಸಾಲ್ಟ್, ಕೊಹ್ಲಿ, ಡೇವಿಡ್, ಪಡಿಕ್ಕಲ್ ಬ್ಯಾಟಿಂಗ್ ಫಾರ್ಮ್‌ನಲ್ಲಿದ್ದಾರೆ. ಕೃನಾಲ್, ಭುವನೇಶ್ವರ್, ಹ್ಯಾಜಲ್‌ವುಡ್ ಬೌಲಿಂಗ್‌ನಲ್ಲಿ ಭರವಸೆ ಮೂಡಿಸಿದ್ದಾರೆ.
ಗುಜರಾತ್ ತಂಡಕ್ಕೆ ಪ್ರಮುಖ ಆಟಗಾರರೇ ಬಲ. ಶುಭಮನ್ ಗಿಲ್, ಜೋಸ್ ಬಟ್ಲರ್, ರಶೀದ್ ಖಾನ್ ತಂಡದಲ್ಲಿ ನಿರ್ಣಾಯಕ ಪಾತ್ರ. ಆರ್‌ಸಿಬಿಯಿಂದ ಗುಜರಾತ್‌ಗೆ ಬಂದಿರುವ ಮೊಹಮ್ಮದ್ ಸಿರಾಜ್ ಕೂಡ ತಂಡದ ಬೌಲಿಂಗ್ ಅಸ್ತ್ರವಾಗಿದ್ದಾರೆ.
ಐಪಿಲ್ ಟೂರ್ನಿಯಲ್ಲಿ ಇದುವರೆಗೆ ಆರ್‌ಸಿಬಿ ಮತ್ತು ಗುಜರಾತ್ ಒಟ್ಟು 5 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಅವುಗಳ ಪೈಕಿ ಆರ್‌ಸಿಬಿ 3ರಲ್ಲಿ ಹಾಗೂ ಗುಜರಾತ್ 2 ಪಂದ್ಯಗಳಲ್ಲಿ ಜಯ ಗಳಿಸಿವೆ.
ಆರ್‌ಸಿಬಿ ಆಟಗಾರರು: ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವದತ್ ಪಡಿಕ್ಕಲ್, ರಜತ್ ಪಾಟೀದಾರ್ (ನಾಯಕ), ಲಿಯಾಮ್ ಲಿವಿಂಗ್‌ಸ್ಟೋನ್, ಜಿತೇಶ್ ಕುಮಾರ್, ಟಿಮ್ ಡೇವಿಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಜೋಶ್ ಹ್ಯಾಜಲ್‌ವುಡ್, ಯಶ್ ದಯಾಳ್, ಸುಯಶ್/ರಸಿತ್.
ಗುಜರಾತ್ ಆಟಗಾರರು: ಸಾಯಿ ಸುದರ್ಶನ್, ಅನುಜ್, ಶುಭಮನ್ ಗಿಲ್ (ನಾಯಕ), ಜೋಸ್ ಬಟ್ಲರ್, ರುಥರ್‌ಪೋರ್ಡ್, ಶಾರುಖ್, ತೆವಾಟಿಯಾ, ರಶೀದ್ ಖಾನ್, ರಬಾಡ, ಸಾಯಿ ಕಿಶೋರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಇಶಾಂತ್ ಶರ್ಮಾ.