ಮುಂಬೈ: ಇಲ್ಲಿನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡ ಸತತ ಎರಡು ಸೋಲಿನ ಬಳಿಕ ಮುಂಬೈ ಇಂಡಿಯನ್ಸ್ ವಿರುದ್ಧ 7 ವಿಕೆಟ್ ಜಯ ಗಳಿಸಿದೆ.
ಗೆಲ್ಲಲು 195 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ್ದ ಡೆಲ್ಲಿ ತಂಡ ಆರಂಭಿಕ ಜೇಸನ್ ರಾಯ್ ಬಿರುಸಿನ ಅರ್ಧ ಶತಕ 91 ರನ್ (53 ಎಸೆತ, ತಲಾ 6 ಬೌಂಡರಿ, 6 ಸಿಕ್ಸರ್) ಹಾಗೂ ರಿಷಬ್ ಪಂತ್ (47) ಬ್ಯಾಟಿಂಗ್ ನೆರವಿನೊಂದಿಗೆ ಗೆಲುವು ಪಡೆಯಿತು.
ಡೆಲ್ಲಿ ಪರ ಉತ್ತಮ ಆರಂಭ ನೀಡಿದ ರಾಯ್ ಹಾಗೂ ಗಂಭೀರ್ ಜೋಡಿ 50 ರನ್ ಗಳ ಜೊತೆಯಾಟ ನೀಡಿತು. ಈ ವೇಳೆ ನಾಯಕ ಗಂಭೀರ್ 15 ರನ್ ಗಳಿಸಿ ರೆಹಮಾನ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಬಂದ ರಿಷಬ್ ಪಂತ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಕೇವಲ 25 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ನೆರವಿನಿಂದ 47 ರನ್ ಸಿಡಿಸಿ ಕುನಲ್ ಬೌಲಿಂಗ್ ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಬಳಿಕ ಬಂದ ಸ್ಫೋಟಕ ಆಟಗಾರ ಮ್ಯಾಕ್ಸ್ ವೆಲ್ 13 ರನ್ ಗಳಿಸಿ ಪೆವಿಲಿಯನ್ ಸೇರಿದರು.
ಬಳಿಕ ಆರಂಭಿಕ ರಾಯ್ ರನ್ನು ಕೂಡಿ ಕೊಂಡ ಶೇಯಸ್ ಅಯ್ಯರ್ (27 ರನ್) ಡೆಲ್ಲಿ ಗೆಲುವಿಗೆ ಪ್ರಮುಖ ಕಾರಣರಾದರು. ಕೊನೆಯ 6 ಓವರ್ ಗಳಲ್ಲಿ 58 ರನ್ ಗಳಿಸುವ ಗುರಿ ಪಡೆದ ಈ ಜೋಡಿ ಎಚ್ಚರಿಕೆಯ ಆಟವಾಡಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಕೊನೆಯ 6 ಎಸೆತಗಳಲ್ಲಿ 11 ರನ್ ಗಳಿಸುವ ಒತ್ತಡದಲ್ಲಿದ್ದ ರಾಯ್, ಬೌಲರ್ ರೆಹಮಾನ್ ಓವರ್ ನ ಮೊದಲ ಎರಡು ಎಸೆತಗಳಲ್ಲಿ ಸಿಕ್ಸರ್ ಹಾಗೂ ಬೌಂಡರಿ ಸಿಡಿಸಿದರು. ಆದರೆ ಬಳಿಕ ರೆಹಮಾನ್ ಮೂರು ಎಸೆತಗಳು ಡಾಟ್ ಮಾಡುವ ಮೂಲಕ ಪಂದ್ಯದ ಕೊನೆಯ ಎಸೆತವರೆಗೆ ರೋಚಕತೆ ಉಳಿಯುವಂತೆ ಮಾಡಿದರು. ಕೊನೆಯ ಎಸೆತದಲ್ಲಿ ರಾಯ್ ಒಂದು ರನ್ ಗಳಿಸಿ ಡೆಲ್ಲಿ ಟೂರ್ನಿಯಲ್ಲಿ ಮೊದಲ ಗೆಲುವು ಪಡೆಯುವಲ್ಲಿ ಕಾರಣರಾದರು. ಮುಂಬೈ ಪರ ಪಾಂಡ್ಯ 2, ರೆಹಮಾನ್ 1 ವಿಕೆಟ್ ಪಡೆದರು. ಹಾಲಿ ಚಾಂಪಿಯನ್ ಮುಂಬೈ ಟೂರ್ನಿಯಲ್ಲಿ ಸತತ 3ನೇ ಸೋಲು ಪಡೆಯಿತು.
ಇದಕ್ಕೂ ಮುನ್ನ ಟಾಸ್ ಸೋತರೂ ಬ್ಯಾಟಿಂಗ್ ಅವಕಾಶ ಪಡೆದ ಮುಂಬಯಿ ಇಂಡಿಯನ್ಸ್ ಪರ ಕಣಕ್ಕೆ ಇಳಿದ ಆರಂಭಿಕರಾದ ಸೂರ್ಯಕುಮಾರ್ ಯಾದವ್, ಇಶನ್ ಕಿಶನ್, ಎವಿನ್ ಲೂಯಿಸ್ ಸ್ಫೋಟಕ ಬ್ಯಾಟಿಂಗ್ ನಡೆಸಿ ಉತ್ತಮ ಆರಂಭ ನೀಡಿದರು.
ಮೊದಲ ಪವರ್ ಪ್ಲೇ ನಲ್ಲಿ ಡೆಲ್ಲಿ ಬೌಲರ್ ಗಳ ಬೆವರಿಳಿಸದ ಲೂಯಿಸ್, ಯಾದವ್ ಜೋಡಿ 84 ರನ್ ಸಿಡಿಸಿದರು. ಅಲ್ಲದೇ ಈ ಜೋಡಿ ಶತಕದ ಜೊತೆಯಾಟವನ್ನು ನೀಡಿ, ವಾಂಖೆಡೆ ಕ್ರೀಡಾಂಗಣದಲ್ಲಿ ಮುಂಬೈ ಪರ ದಾಖಲೆ ನಿರ್ಮಿಸಿತು. ಈ ವೇಳೆ 32 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್ ನೆರವಿನೊಂದಿಗೆ 53 ರನ್ ಗಳಿಸಿದ್ದ ಯಾದವ್ ಹಾಗೂ 48 ರನ್ ಗಳಿಸಿದ್ದ ಎಲ್ವಿನ್ ಲೂಯಿಸ್ ರಾಹುಲ್, ತಿವಟಿಯ ಬೌಲಿಂಗ್ ನಲ್ಲಿ ಪೆವಿಲಿಯನ್ ಸೇರಿದರು. ಮುಂಬೈ ಮೊದಲ 6 ಓವರ್ ರನ್ – 15, 10, 15, 12, 14, 18 ಒಟ್ಟು 84 ರನ್
ಇತ್ತ ಬಿರುಸಿನ ಬ್ಯಾಟಿಂಗ್ ನಡೆಸಿದ ಇಶನ್ ಕಿಶನ್ ಕೇವಲ 23 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ನೆರವಿನಿಂದ 44 ರನ್ ಸಿಡಿಸಿ ತಂಡದ ಮೊತ್ತವನ್ನು 15 ಓವರ್ ಗಳಲ್ಲಿ 160 ರನ್ ಗಡಿದಾಟಲು ನೆರವಾದರು. ಈ ವೇಳೆ ಬೌಲರ್ ಡೆನಿಯಲ್ ಕ್ರಿಸ್ಟನ್ ಎಸೆತದಲ್ಲಿ ಬಾರಿ ಒಡೆತಕ್ಕೆ ಕೈ ಹಾಕಿ ಕ್ಯಾಚ್ ನೀಡಿ ನಿರ್ಗಮಿಸಿದರು. ಮರು ಎಸೆತದಲ್ಲೇ ಪೊಲಾಡ್ ಶೂನ್ಯ ಸುತ್ತಿ ನಿರಾಸೆ ಮೂಡಿಸಿದರು.
ಬಳಿಕ ಬಂದ ನಾಯಕ ರೋಹಿತ್ ಶರ್ಮಾ (18), ಕುಶಲ್ ಪಾಂಡ್ಯ (11) ಹೋರಾಟ ಬಹುಬೇಗ ಅಂತ್ಯವಾಯಿತು. ಬೌಲರ್ ಗಳಾದ ಧನಂಜಯ್ ಹಾಗೂ ಮಾರ್ಕಡೆ ತಲಾ ರನ್ ಗಳಿಸಿ ಆಜೇಯರಾಗಿ ಉಳಿದರು. ಡೆಲ್ಲಿ ಪರ ಬೌಲ್ಟ್, ಡೆನಿಯಲ್, ರಾಹುಲ್ ತಲಾ 2, ಶಮಿ 1 ವಿಕೆಟ್ ಪಡೆದರು.