ಬೆಂಗಳೂರು: ರೌಡಿಶೀಟರ್ ಬಿಕ್ಲು ಶಿವ ಕೊಲೆ (Biklu Shiva Case) ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಎ1 ಆರೋಪಿ ಜಗ್ಗನನ್ನು ಸಿಐಡಿ ಅಧಿಕಾರಿಗಳು (CID Officers) ವಿಚಾರಣೆ ನಡೆಸಿದ್ದಾರೆ. ಈ ವೇಳೆ ನನಗೂ ಶಾಸಕ ಬೈರತಿ ಬಸವರಾಜ್‌ಗೂ (Byrathi Basavaraj) ಯಾವುದೇ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದಾನೆ.
ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಎ1 ಆರೋಪಿ ಜಗದೀಶ್ ಅಲಿಯಾಸ್ ಜಗ್ಗನನ್ನು ಸಿಐಡಿ ಅಧಿಕಾರಿಗಳು ಮಂಗಳವಾರ (ಆ.26) ಬಂಧಿಸಿದ್ದರು. ಸದ್ಯ ಆತನನ್ನು ಹತ್ತು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದು, ತನಿಖಾ ತಂಡ ವಿಚಾರಣೆ ಆರಂಭಿಸಿದೆ.ಇದನ್ನೂ ಓದಿ: ಭಾರತದಲ್ಲಿ 5 ಲಕ್ಷ ಉಚಿತ ChatGPT ಖಾತೆ – OpenAI ಘೋಷಣೆ
ಸಿಐಡಿ ಎಸ್.ಪಿ ವೆಂಕಟೇಶ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದ್ದು, ಬಿಕ್ಲು ಶಿವನ ಜೊತೆ ಇದ್ದ ವೈಷಮ್ಯದ ಬಗ್ಗೆ, ಕಿತ್ತಗನೂರಿನ ಜಮೀನಿನ ಗಲಾಟೆಯ ಬಗ್ಗೆ, ಹಳೆ ಕೇಸ್‌ಗಳು, ಬೈರತಿ ಬಸವರಾಜ್ ಜೊತೆಗಿನ ಸಂಪರ್ಕ ಸೇರಿ ಹಲವು ವಿಚಾರಗಳನ್ನು ಬಾಯ್ಬಿಡಿಸಲು ಯತ್ನಿಸುತ್ತಿದ್ದಾರೆ. ಈ ವೇಳೆ ಜಗ್ಗ, ನನಗೂ ಬೈರತಿ ಬಸವರಾಜ್‌ಗೂ ಆತ್ಮೀಯತೆ ಇಲ್ಲ. ಕ್ಷೇತ್ರದ ಶಾಸಕರಾದ ಹಿನ್ನೆಲೆ ಹಲವು ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದೆ. ಇನ್ನು ಕುಂಭಮೇಳಕ್ಕೆ ಹೋಗಿದ್ದಾಗ ಅಲ್ಲಿ ಸಿಕ್ಕಿದ್ದರು. ಭೇಟಿಯಾಗಿ ಫೋಟೊ ತೆಗೆದುಕೊಂಡಿದ್ದೆ. ಕ್ಷೇತ್ರದ ಶಾಸಕರು ಅಂತಾ ಫೋಟೋ ತೆಗೆಸಿಕೊಂಡಿದ್ದು, ಬಿಕ್ಲು ಶಿವ ಕೊಲೆಗೂ ಶಾಸಕರಿಗೂ ಸಂಬಂಧವಿಲ್ಲ ಎಂದು ಹೇಳಿದ್ದಾನೆ.
ಸದ್ಯ ತನಿಖಾಧಿಕಾರಿಗಳು ಕೊಲೆಯಲ್ಲಿ ಜಗ್ಗನ ಪಾತ್ರದ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಏನಿದು ಪ್ರಕರಣ?
ಜುಲೈ 15ರಂದು ಬಿಕ್ಲು ಶಿವನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಶಿವ ಅವರ ತಾಯಿ ವಿಜಯಲಕ್ಷ್ಮಿ ಅವರು ನೀಡಿದ ದೂರು ಆಧರಿಸಿ ಕೆ.ಆರ್.ಪುರ ಕ್ಷೇತ್ರದ ಬಿಜೆಪಿ ಶಾಸಕ ಬೈರತಿ ಬಸವರಾಜ್ ಸೇರಿದಂತೆ ಐವರ ವಿರುದ್ಧ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಬೈರತಿ ಬಸವರಾಜ್ ಅವರನ್ನು ಭಾರತಿನಗರ ಠಾಣೆಯ ಪೊಲೀಸರು ಎರಡು ಬಾರಿ ವಿಚಾರಣೆ ನಡೆಸಿದ್ದರು. 15 ಆರೋಪಿಗಳನ್ನು ಬಂಧಿಸಿದ್ದರು. ಅದಾದ ಮೇಲೆ ಪ್ರಕರಣವನ್ನು ಸಿಐಡಿ ತನಿಖೆಗೆ ಸರ್ಕಾರ ವಹಿಸಿತ್ತು.ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ನೀಡಿ ಪತ್ನಿಗೆ ಬೆಂಕಿ ಇಟ್ಟ ಪೊಲೀಸ್ ಕಾನ್‌ಸ್ಟೇಬಲ್