ದುಬೈ: ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದು ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಸಿಡಿಸಿದ್ದ ಟೀ ಇಂಡಿಯಾ ಆಟಗಾರ ರೋಹಿತ್ ಶರ್ಮಾ, ಐಸಿಸಿ ಬಿಡುಗಡೆ ಮಾಡಿರುವ ಶ್ರೇಯಾಂಕ ಪಟ್ಟಿಯಲ್ಲಿ ಭಾರೀ ಜಿಗಿತ ಕಂಡಿದ್ದಾರೆ. ಅಲ್ಲದೇ ವೃತ್ತಿ ಜೀವನದ ಶ್ರೇಷ್ಠ ಟೆಸ್ಟ್ ರ‍್ಯಾಂಕಿಂಗ್ ಸ್ಥಾನ ಪಡೆದ ಸಾಧನೆಯನ್ನು ಮಾಡಿದ್ದಾರೆ.
ಐಸಿಸಿ ಬಿಡುಗಡೆ ಮಾಡಿರುವ ಶ್ರೇಯಾಂಕ ಪಟ್ಟಿಯಲ್ಲಿ 36 ಸ್ಥಾನಗಳ ಜಿಗಿತ ಕಂಡ ರೋಹಿತ್ ಶರ್ಮಾ 17ನೇ ಸ್ಥಾನವನ್ನು ಪಡೆದಿದ್ದಾರೆ. ವಿಶಾಖಪಟ್ಟಣಂನದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 176 ಮತ್ತು 127 ರನ್ ಗಳೊಂದಿಗೆ ಶತಕ ಸಿಡಿಸಿದ್ದ ರೋಹಿತ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಟೀಂ ಇಂಡಿಯಾ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಯೊಂದಿಗೆ ಮುನ್ನಡೆ ಪಡೆಯಿತು.
Advertisement
Advertisement
ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ದ್ವಿಶತಕ ಸಾಧನೆ ಮಾಡಿದ್ದ ಕನ್ನಡಿಗ ಮಯಾಂಕ್ ಅಗರ್ವಾಲ್ 25ನೇ ಸ್ಥಾನವನ್ನು ಪಡೆದಿದ್ದಾರೆ. ಆದರೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಶ್ರೇಯಾಂಕ ಪಟ್ಟಿಯ ಅಂಕಗಳಲ್ಲಿ ಇಳಿಮುಖ ಕಂಡಿದ್ದಾರೆ. 2018 ರ ಬಳಿಕ ಕೊಹ್ಲಿ ಮೊದಲ ಬಾರಿಗೆ 900 ಅಂಕಗಳಿಗಿಂತ ಕಡಿಮೆ ಪಡೆದಿದ್ದು, 899 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. 38 ಅಂಕಗಳು ಹೆಚ್ಚು ಹೊಂದಿರುವ ಆಸೀಸ್ ಆಟಗಾರ ಸ್ಮಿತ್ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಉಳಿದಂತೆ ಟೆಸ್ಟ್ ಬೌಲಿಂಗ್ ನಲ್ಲಿ ಟೀಂ ಇಂಡಿಯಾ ಅನುಭವಿ ಸ್ಪಿನ್ನರ್ ಆರ್.ಅಶ್ವಿನ್ 10ನೇ ಸ್ಥಾನ ಪಡೆದಿದ್ದಾರೆ.