ದುಬೈ: ನ್ಯೂಜಿಲೆಂಡ್ (New Zealand) ವಿರುದ್ಧ ನಡೆದ ಚಾಂಪಿಯನ್ಸ್ ಟ್ರೋಫಿ (Champions Trophy) ಫೈನಲ್ ಪಂದ್ಯದಲ್ಲಿ 4 ವಿಕೆಟ್‌ಗಳ ಗೆಲುವು ಸಾಧಿಸುವ ಮೂಲಕ ಭಾರತ 3ನೇ ಬಾರಿಗೆ ಕಿರೀಟ ಮುಡಿಗೇರಿಸಿಕೊಂಡಿದೆ. ಇದು ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಗೆದ್ದ 2ನೇ ಐಸಿಸಿ ಟ್ರೋಫಿ ಎಂಬುದೂ ಸಹ ವಿಶೇಷ.
ಇನ್ನೂ 2024ರ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಬಳಿಕ ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿದ್ದ ರೋಹಿತ್ ಶರ್ಮಾ, ಫೈನಲ್ ಪಂದ್ಯದ ಬಳಿಕ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವ ವದಂತಿ ಹಬ್ಬಿತ್ತು. ಈ ಬಗ್ಗೆ ಕೊನೆಗೂ ಮೌನ ಮುರಿದಿದ್ದಾರೆ. ಪೋಸ್ಟ್ ಪ್ರಸೆಂಟೇಷನ್‌ನಲ್ಲಿ ಭವಿಷ್ಯದ ಯೋಜನೆಗಳೇನಾದ್ರೂ ಇದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದ ರೋಹಿತ್ 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಕಾಣಿಸಿಕೊಳ್ಳುವ ಸುಳಿವು ಕೊಟ್ಟಿದ್ದಾರೆ. ಭವಿಷ್ಯದ ಯೋಜನೆಗಳು ಭವಿಷ್ಯದಲ್ಲಿ ಬರುತ್ತವೆ. ಸದ್ಯಕ್ಕೆ, ಎಲ್ಲವೂ ಹಾಗೆಯೇ ಮುಂದುವರಿಯುತ್ತದೆ ಎಂದು ರೋಹಿತ್ ಹೇಳಿದ್ದಾರೆ.
ಸೆಮಿ ಫೈನಲ್ ವರೆಗೂ ಬ್ಯಾಟಿಂಗ್‌ನಲ್ಲಿ ಫಾರ್ಮ್ ಕಳೆದುಕೊಂಡಿದ್ದ ರೋಹಿತ್ ಶರ್ಮಾ ಫೈನಲ್‌ನಲ್ಲಿ ಕೀವೀಸ್ ಬೌಲರ್‌ಗಳನ್ನು ಚೆಂಡಾಡಿದರು. 83 ಎಸೆತಗಳಲ್ಲಿ 75 ರನ್ ಚಚ್ಚಿ ಟೀಂ ಇಂಡಿಯಾ ಗೆಲುವಿಗೆ ಕಾರಣರಾದರು.
ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿತ್ತು. ಸ್ಪರ್ಧಾತ್ಮಕ ಮೊತ್ತದ ಗುರಿ ಬೆನ್ನಟ್ಟಿದ ಭಾರತ (Team India) 49 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ ಗಳಿಸಿ ಗೆಲುವು ಸಾಧಿಸಿತು. ಸಂಘಟಿತ ಬೌಲಿಂಗ್, ಬ್ಯಾಟಿಂಗ್ ಪ್ರದರ್ಶನದೊಂದಿಗೆ 2000 ಇಸವಿಯಲ್ಲಿ ಕಿವೀಸ್ ವಿರುದ್ಧ ಫೈನಲ್ ಸೋಲಿಗೆ ಸೇಡು ತೀರಿಸಿಕೊಂಡಿತು.
ಮುಂದುವರಿದು.. ಈ ಟ್ರೋಫಿಯನ್ನು ನನ್ನ ದೇಶಕ್ಕೆ ಅರ್ಪಿಸುತ್ತೇನೆ. ಏಕೆಂದರೆ ನಾವು ಗೆಲ್ಲಬೇಕೆಂದು ಪ್ರತಿಯೊಬ್ಬರು ಬಯಸಿದ್ದರು ಶರ್ಮಾ ಭಾವುಕರಾಗಿದ್ದಾರೆ.
2 ಬಾರಿ ಫೈನಲ್‌ನಲ್ಲಿ ಸೋಲು:
1998-99ರ ಚೊಚ್ಚಲ ಆವೃತ್ತಿಯಲ್ಲೇ ಚೋಕರ್ಸ್ ದಕ್ಷಿಣ ಆಫ್ರಿಕಾ ಟ್ರೋಫಿ ಮುಡಿಗೇರಿಸಿಕೊಂಡಿತ್ತು. 2000-01ರ ಆವೃತ್ತಿಯಲ್ಲಿ ನ್ಯೂಜಿಲೆಂಡ್ ಟ್ರೋಫಿ ಗೆದ್ದುಕೊಂಡಿತ್ತು. ಆದ್ರೆ 2002-03ರ ಆವೃತ್ತಿಯಲ್ಲಿ 2 ದಿನ ಫೈನಲ್ ನಡೆದರೂ ಮಳೆಗೆ ಪಂದ್ಯ ಬಲಿಯಾಯ್ತು. ಆದ್ದರಿಂದ ಭಾರತ ಮತ್ತು ಶ್ರೀಲಂಕಾವನ್ನ ಜಂಟಿಯಾಗಿ ಚಾಂಪಿಯನ್ಸ್ ಎಂದು ಘೋಷಿಸಲಾಯಿತು. ಇನ್ನೂ 2004ರಲ್ಲಿ ವೆಸ್ಟ್ ಇಂಡೀಸ್, 2006-07, 2009-10ರಲ್ಲಿ ಆಸ್ಟ್ರೇಲಿಯಾ, 2013ರಲ್ಲಿ ಭಾರತ, 2017ರಲ್ಲಿ ಪಾಕಿಸ್ತಾನ ಚಾಂಪಿಯನ್ ಆಗಿತ್ತು. 2000, 2017ರಲ್ಲಿ ಭಾರತ ಫೈನಲ್ ತಲುಪಿದ್ರೂ ಟ್ರೋಫಿ ಗೆಲ್ಲುವ ಅವಕಾಶ ಕಳೆದುಕೊಂಡಿತ್ತು. 2000 ಇಸವಿಯಲ್ಲಿ ಕಿವೀಸ್ ವಿರುದ್ಧ, 2017ರಲ್ಲಿ ಪಾಕಿಸ್ತಾನದ ವಿರುದ್ಧ ಫೈನಲ್‌ನಲ್ಲಿ ಸೋತು ನಿರಾಸೆ ಅನುಭವಿಸಿತ್ತು. ಸದ್ಯ 25 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿಯಲ್ಲಿ ಕಿವೀಸ್ ವಿರುದ್ಧ ಗೆದ್ದು ಭಾರತ ಸೇಡು ತೀರಿಸಿಕೊಂಡಿದೆ.