ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಕಳೆದ ವರ್ಷ ಮೂರು ಬೆಂಜ್ ಕಾರನ್ನು ಖರೀದಿಸಿದ್ದರು. ಆ ಕಾರುಗಳಲ್ಲಿ ಒಂದು ಕಾರಿಗೆ ‘ಬಾಸ್’ ನಂಬರ್ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ಅವರ ಬೆಂಜ್ ಕಾರಿಗೆ ಕೆಎ 05 ಎಂವೈ 8055 ನಂಬರ್ ಸಿಕ್ಕಿದೆ. 8055 ಬಾಸ್ ಅರ್ಥ ಕೊಡುತ್ತದೆ. ಹಾಗಾಗಿ ಇಷ್ಟು ದಿನ ಯಶ್ ಈ ಫ್ಯಾನ್ಸಿ ನಂಬರ್ ಗೆ ಕಾದು ಇದನ್ನು ಖರೀದಿ ಮಾಡಿದ್ದಾರೆ.
ಮಂಗಳವಾರ ಶಾಂತಿನಗರದ ಆರ್ ಟಿಒ ಕೇಂದ್ರ ಕಚೇರಿಯಲ್ಲಿ ನಾಲ್ಕು ಚಕ್ರದ ವಾಹನಗಳ ಫ್ಯಾನ್ಸಿ ನಂಬರ್ ಹರಾಜಾಗಿದೆ. ಈ ವೇಳೆ ಯಶ್ ಪರವಾಗಿ ರಾಕೇಶ್ 78,000 ರೂ. ಕೊಟ್ಟು ಕೆಎ 05 ಎಂವೈ 8055 ನಂಬರ್ ಖರೀದಿ ಮಾಡಿದ್ದಾರೆ.
ಈ ನಂಬರ್ ಯಶ್ ಇಷ್ಟಪಟ್ಟಿದ್ದು, ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ ಅದನ್ನು ಖರೀದಿಸಲು ಯಶ್ ರಾಕೇಶ್ ಗೆ ತಿಳಿಸಿದ್ದರು. ಅಲ್ಲದೇ ಹರಾಜಿನಲ್ಲಿ ಯಾರೂ ಬಿಡ್ ಮಾಡದ ಹಿನ್ನೆಲೆಯಲ್ಲಿ ಯಶ್ ಕಡಿಮೆ ಮೊತ್ತದಲ್ಲಿ ಈ ನಂಬರ್ ಅನ್ನು ಖರೀದಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ 9ಕ್ಕೆ ಯಶ್ ತಮ್ಮ ಮೊದಲ ಮದುವೆ ವಾರ್ಷಿಕೋತ್ಸವಕ್ಕಾಗಿ ಬೆಂಜ್ ಕಾರುಗಳನ್ನು ಖರೀದಿಸಿದ್ದರು. ಬೆಂಗಳೂರಿನ ಶೋ ರೂಂಗೆ ಯಶ್ ಭೇಟಿ ನೀಡಿ ಮೂರು ಟಾಪ್ ಎಂಡ್ ಮಾಡಲ್ ಕಾರು ಖರೀದಿ ಮಾಡಿದ್ದರು. ಬೆಂಜ್ ಜಿಎಲ್‍ಸಿ, ಬೆಂಜ್ ಇ ಕ್ಲಾಸ್, ಬೆಂಜ್ ಬಿಎಲ್‍ಸಿ ಎಎಂಜಿ ಕಾರುಗಳನ್ನು ಇಷ್ಟಪಟ್ಟು ಖರೀದಿಸಿದ್ದರು. ಬೆಂಜ್ ಇ ಕ್ಲಾಸ್ ಕಾರು ಅಪ್ಪ-ಅಮ್ಮನಿಗೆ, ಬೆಂಜ್ ಜಿಎಲ್‍ಸಿ ಪತ್ನಿ ರಾಧಿಕಾಗೆ ಹಾಗೂ ಬೆಂಜ್ ಬಿಎಲ್‍ಸಿ ಎಎಂಜಿ ಕಾರನ್ನು ತಮಗಾಗಿ ರಾಕಿಂಗ್ ಸ್ಟಾರ್ ಯಶ್ ಖರೀದಿಸಿದ್ದರು.