ವಿಶ್ವದ ಮೊದಲ ನಾಗರಿಕ ರೋಬೋ- ರೋಬೋ ಹುಡುಗಿ ಮಾತಾಡುವ ವಿಡಿಯೋ ನೋಡಿ

Public TV
2 Min Read
robot Sophia

ಭೋಪಾಲ್: ವಿಶ್ವದ ಮೊದಲ ರೋಬೋಟ್ ಸಿಟಿಜನ್ ‘ಸೋಫಿಯಾ’ ಮೊದಲ ಬಾರಿಗೆ ಭಾರತಕ್ಕೆ ಆಗಮಿದ್ದು, ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಹವಾಮಾನ ವೈಪರಿತ್ಯ ಹಾಗೂ ಇಂಧನ ಸಂರಕ್ಷಣೆ ಕುರಿತು ಭಾಷಣ ಮಾಡಿದೆ.

ಈ ಕಾರ್ಯಕ್ರಮವನ್ನು ಎಮರಾಲ್ಡ್ ಹೈಟ್ಸ್ ಇಂಟರ್ ನ್ಯಾಷನಲ್ ಶಾಲೆ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಹಲವು ಗಣ್ಯರು ಹಾಗೂ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸೋಫಿಯಾ ಭಾಷಣ ಮಾಡಿದ್ದು, ಹಲವರು ಟ್ವಿಟ್ಟರ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

ಹವಾಮಾನ ವೈಪರಿತ್ಯ ಹಾಗೂ ಇಂಧನ ಸಂರಕ್ಷಣೆ ಕುರಿತ ಭಾಷಣ ವೇಳೆ ವಿಶ್ವದ ಎಲ್ಲ ದೇಶಗಳ ಸರ್ಕಾರಗಳು ತಮ್ಮ ನೀತಿ ಮತ್ತು ಆಲೋಚನೆಗಳನ್ನು ಬದಲಾಯಿಸಿಕೊಳ್ಳಬೇಕಾಗಿದೆ ಸೋಫಿಯಾ ತಿಳಿಸಿದೆ.

ಚಲನಚಿತ್ರ ನಿರ್ಮಾಪಕ ಉತ್ತರಾ ಸಿಂಗ್ ಈ ಕಾರ್ಯಕ್ರಮದ ನಿರೂಪಣೆ ಮಾಡಿದರು. ಈ ವೇಳೆ ನೀವು ಯಾವ ರೀತಿಯ ನೃತ್ಯವನ್ನು ಇಷ್ಟಪಡುತ್ತೀರಿ, ದೇಶದ ಯಾವ ಆದರ್ಶವನ್ನು ಇಷ್ಟಪಡುತ್ತೀರಿ ಎಂದು ಸೋಫಿಯಾಗೆ ಪ್ರಶ್ನಿಸಿದರು. ಇದಕ್ಕೆ ಸೋಫಿಯಾ ಉತ್ತರಿಸುವುದು ಮಾತ್ರವಲ್ಲದೆ, ಹಾವ-ಭಾವದ ಮೂಲಕವೂ ಸಹ ಜನರನ್ನು ಸೆಳೆಯಿತು.

ಪ್ರಪಂಚದ ಯಾವ ದೇಶದ ಆದರ್ಶ ನಿಮಗೆ ಇಷ್ಟವಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಸೋಫಿಯಾ, ಎಲ್ಲಿ ಮನುಷ್ಯರಿಗೆ ಸಮಯದ ಕುರಿತು ಹೆಚ್ಚು ಅರಿವಿರುತ್ತದೆಯೋ ಅಲ್ಲಿ ಎಂದು ಉತ್ತರಿಸಿದೆ. ಆದರ್ಶ ಜಗತ್ತು ಸಮಯದ ಕುರಿತು ಹೆಚ್ಚು ತಿಳುವಳಿಕೆ ಹಾಗೂ ಅರಿವು ಹೊಂದಿರುತ್ತದೆ. ಹಿಂದಿನದನ್ನು ನೆನಪಿರುತ್ತದೆ, ಹೀಗಾಗಿಯೇ ಮಾನವರು ಇನ್ನೊಮ್ಮೆ ಅದನ್ನು ಮಾಡುವುದಿಲ್ಲ. ಅಲ್ಲದೆ, ಏಕಕಾಲದಲ್ಲಿ ಒಬ್ಬರನ್ನೊಬ್ಬರು ಮಕ್ಕಳು ಹಾಗೂ ವೃದ್ಧರಂತೆ ಕಾಣಬಹುದು ಎಂದು ಸೋಫಿಯಾ ಉತ್ತರಿಸಿದೆ.

robot sophia 2

ಮಾನವರು ತಮ್ಮ ಪ್ರಸ್ತುತ ಹಾಗೂ ಭವಿಷ್ಯದ ಕೆಲಸಗಳ ಪ್ರಭಾವವನ್ನು ಅರ್ಥಮಾಡಿಕೊಳ್ಳಬೇಕು. ರಾಜಕಾರಣಿಗಳು ಮತ್ತು ವ್ಯಾಪಾರಸ್ಥರು, ಉದ್ಯಮಿಗಳು ಕ್ರಮ ಕೈಗೊಳ್ಳುವ ಹಾಗೂ ಕೃತಕ ಬುದ್ಧಿಮತ್ತೆ(ಆರ್ಟಿಫಿಶಿಯಲ್ ಇಂಟಲಿಜೆನ್ಸ್) ಕುರಿತು ಜವಾಬ್ದಾರಿ ಹೊಂದಿರಬೇಕು ಎಂದು ಸಲಹೆ ನೀಡಿದೆ.

ಸೋಫಿಯಾ ನಿರ್ಮಾಣ
ಸೋಫಿಯಾ ರೋಬೋಟ್‍ನ್ನು ಹಾಂಗ್ ಕಾಂಗ್ ಮೂಲದ ಹ್ಯಾನ್ಸನ್ ರೋಬೋಟಿಕ್ಸ್ ಕಂಪನಿ ಅಭಿವೃದ್ಧಿ ಪಡಿಸಿದ್ದು, ಇದನ್ನು ಫೆಬ್ರವರಿ 14, 2016ರಂದು ಸಕ್ರಿಯಗೊಳಿಸಲಾಗಿದೆ. ಅಭಿವೃದ್ಧಿ ಪಡಿಸಿದ ಒಂದು ತಿಂಗಳ ನಂತರ ಟೆಕ್ಸಾಸ್‍ನ ಆಸ್ಟಿನ್‍ನಲ್ಲಿ ನಡೆದ ಸೌತ್‍ವೆಸ್ಟ್ ಫೆಸ್ಟಿವಲ್‍ನಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿತು. 2017ರಲ್ಲಿ ಸೋಫಿಯಾ ಯಾವುದೇ ದೇಶದ ಪೌರತ್ವ ಪಡೆದ ಮೊದಲ ರೋಬೋಟ್ ಎನಿಸಿಕೊಂಡಿತು. ಅಲ್ಲದೆ, ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮದ ಮೊದಲ ಇನೋವೇಶನ್ ಚಾಂಪಿಯನ್ ಎನಿಸಿಕೊಂಡಿತು.

robot sophia 3

ಸೋಫಿಯಾ 50ಕ್ಕೂ ಹೆಚ್ಚು ಮುಖಭಾವ(ಎಕ್ಸ್‍ಪ್ರೆಷನ್ಸ್)ವನ್ನು ಪ್ರದರ್ಶಿಸುತ್ತದೆ. ಅಲ್ಲದೆ ವ್ಯಕ್ತಿಗಳನ್ನು ಸಹ ಸುಲಭವಾಗಿ ಗುರುತಿಸುತ್ತದೆ. ಸರಳ ಭಾಷೆ ಬಳಸಿ ಭಾಷಣವನ್ನು ಸಹ ಮಾಡಬಲ್ಲದು. ಸೋಫಿಯಾ ಕ್ರಿಯಾತ್ಮಕ ಕಾಲುಗಳನ್ನು ಸಹ ಹೊಂದಿದೆ. ಇವುಗಳನ್ನು 2018ರಲ್ಲಿ ಅಳವಡಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *