ನವದೆಹಲಿ: ಉತ್ತರ ಪ್ರದೇಶದ ಪೂರ್ವ ಭಾಗದ ಉಸ್ತುವಾರಿ ಹೊತ್ತಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರ ಪತಿ ರಾಬರ್ಟ್ ವಾದ್ರಾ ಕುತ್ತಿಗೆ ಮತ್ತು ಬೆನ್ನು ನೋವಿನ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ನೋಯ್ಡಾ ಸೆಕ್ಟರ್ 11 ರಲ್ಲಿರುವ ಮೆಟ್ರೋ ಆಸ್ಪತ್ರೆಗೆ ರಾಬರ್ಟ್ ವಾದ್ರಾ ಅವರನ್ನು ದಾಖಲಿಸಲಾಗಿದೆ. ಈ ಹಿಂದೆಯಿಂದಲೂ ಅವರಿಗೆ ಬೆನ್ನು ಮತ್ತು ಕುತ್ತಿಗೆ ನೋವಿನ ಸಮಸ್ಯೆ ಇದ್ದು, ಹೆಚ್ಚಿನ ತಪಾಸಣೆಗಾಗಿ ವೈದ್ಯರು ಆಸ್ಪತ್ರೆಗೆ ಬಂದು ದಾಖಲಾಗುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ವಾದ್ರಾ ಸೋಮವಾರ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರಾಬರ್ಟ್ ವಾದ್ರಾ ಅವರು ಸೋಮವಾರ ಬೆಳಗ್ಗೆ ಸುಮಾರು 7:30 ಕ್ಕೆ ಆಸ್ಪತ್ರೆಗೆ ಬಂದು ದಾಖಲಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪತಿಯನ್ನು ನೋಡಲು ಪ್ರಿಯಾಂಕ ಗಾಂಧಿ ಅವರು ಸಂಜೆ 7 ಗಂಟೆಗೆ ಹೋಗಿದ್ದಾರೆ. ಆಸ್ಪತ್ರೆಯಿಂದ ಮರಳಿದ ಪ್ರಿಯಾಂಕ ಮತ್ತೆ ತೆರಳಿ ರಾತ್ರಿ ಪೂರ್ತಿ ಅಲ್ಲೇ ಇದ್ದು ಪತಿಯ ಯೋಗಕ್ಷೇಮ ನೋಡಿಕೊಂಡಿದ್ದಾರೆ.
ವಾದ್ರಾ ಅವರಿಗೆ ಚಿಕಿತ್ಸೆ ಕೊಡುತ್ತಿರುವ ಬಗ್ಗೆ ಮೆಟ್ರೋ ಆಸ್ಪತ್ರೆ ವೈದ್ಯರು ಯಾವುದೇ ಅಧಿಕೃತ ಹೇಳಿಕೆಯನ್ನು ನೀಡಿಲ್ಲ. ಆದರೆ ವಾದ್ರಾ ಅವರಿಗೆ ಮೂಳೆ ಚಿಕಿತ್ಸೆ ವಿಭಾಗದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ವಾದ್ರಾ ಅವರು ಆಸ್ಪತ್ರೆ ಸೇರಿದ ಕಾರಣ ಆಸ್ಪತ್ರೆ ಸುತ್ತ ವಿಶೇಷ ಭದ್ರತಾ ಪಡೆ (ಎಸ್ಪಿಜಿ) ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ.