ಬೆಂಗಳೂರು: ನಟ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ಪೋಸ್ಟರ್ ಮೂಲಕವೇ ಭಾರೀ ಸದ್ದು ಮಾಡುತ್ತಿದೆ. ಜೊತೆಗೆ ರಾಬರ್ಟ್ ಚಿತ್ರತಂಡದಲ್ಲಿ ತಾರಾ ಬಳಗ ಕೂಡ ಅಧಿಕವಾಗುತ್ತಿದೆ. ಇದೀಗ ಚಿತ್ರತಂಡಕ್ಕೆ ಮತ್ತೊಬ್ಬ ನಟಿಯ ಆಗಮನವಾಗಿದೆ.
ನಟಿ ಐಶ್ವರ್ಯ ಪ್ರಸಾದ್ ಹೊಸದಾಗಿ ‘ರಾಬರ್ಟ್’ ಚಿತ್ರತಂಡಕ್ಕೆ ಸೇರಿಕೊಂಡಿದ್ದಾರೆ. ಈಗಾಗಲೇ ಚಿತ್ರದಲ್ಲಿ ದರ್ಶನ್‍ಗೆ ಜೋಡಿಯಾಗಿ ಭದ್ರಾವತಿ ಬೆಡಗಿ ಆಶಾ ಭಟ್ ನಾಯಕಿಯಾಗಿದ್ದಾರೆ. ಇವರ ಜೊತೆಗೆ ನಟಿ ತೇಜಸ್ವಿನಿ ಪ್ರಕಾಶ್ ಕೂಡ ನಟಿಸುತ್ತಿದ್ದಾರೆ. ಈಗ ಈ ನಾಯಕಿಯರ ನಂತರ ಐಶ್ವರ್ಯ ಪ್ರಸಾದ್ ಸಹ ಚಿತ್ರತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಐಶ್ವರ್ಯ ಪ್ರಸಾದ್ ಮೂಲತಃ ಮೈಸೂರಿನವರಾಗಿದ್ದು, ಭಾನುವಾರ ಅವರ ಹುಟ್ಟುಹಬ್ಬ ಇತ್ತು. ಹೀಗಾಗಿ ಚಿತ್ರತಂಡ ಅವರನ್ನು ಸ್ವಾಗತ ಮಾಡಿ ಹುಟ್ಟುಹಬ್ಬಕ್ಕೆ ವಿಶ್ ಮಾಡಿದೆ. ನಟಿ ಐಶ್ವರ್ಯ ಕೂಡ ‘ರಾಬರ್ಟ್’ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಐಶ್ವರ್ಯ ಪ್ರಸಾದ್ ಮಿಸ್ ಮೈಸೂರು ವಿನ್ನರ್ ಆಗಿದ್ದಾರೆ. ಅಷ್ಟೇ ಅಲ್ಲದೇ ಫೆಮಿನಾ ಮಿಸ್ ಇಂಡಿಯಾ 2017ರ ಸ್ಪರ್ಧಿಗಳ ಪೈಕಿ ಒಬ್ಬರಾಗಿದ್ದರು. ಈಗಾಗಲೇ ಐಶ್ವರ್ಯ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದು, ಅರವಿಂದ್ ಕೌಶಿಕ್ ನಿರ್ದೇಶನದ ‘ಶಾರ್ದೂಲ’ ಮತ್ತು ‘ಪಡ್ಡೆಹುಲಿ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ದರ್ಶನ್ ಜೊತೆ ಅಭಿನಯಿಸುವ ದೊಡ್ಡ ಅವಕಾಶ ಸಿಕ್ಕಿದೆ.
So glad to be part of #Roberrt journey have had best experience working ????@dasadarshan @TharunSudhir @UmapathyFilms
And many many thanks to all #DBoss fans ???? pic.twitter.com/Srz7jQUSnp
— Aishwarya prasad (@Aishwaryapras5) January 26, 2020
‘ರಾಬರ್ಟ್’ ಸಿನಿಮಾದ ಚಿತ್ರೀಕರಣ ಈಗಾಗಲೇ ಮುಗಿದಿದೆ. ಆದರೆ ಚಿತ್ರತಂಡ ಪ್ರಸಾದ್‍ರನ್ನು ಈಗ ಸ್ವಾಗತ ಮಾಡಿದೆ. ಹೀಗಾಗಿ ಅಭಿಮಾನಿಗಳಲ್ಲಿ ಗೊಂದಲ ಮೂಡಿದೆ. ಆದರೆ ಐಶ್ವರ್ಯ ಹುಟ್ಟುಹಬ್ಬದ ಕಾರಣ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ತರುಣ್ ಸುಧೀರ್ ನಿರ್ದೇಶನದಲ್ಲಿ ‘ರಾಬರ್ಟ್’ ಸಿನಿಮಾ ಮೂಡಿ ಬಂದಿದ್ದು, ಉಮಾಪತಿ ನಿರ್ಮಾಣ ಮಾಡಿದ್ದಾರೆ.