ಬೆಂಗಳೂರು: ಇಬ್ಬರೇ ವೃದ್ಧರು ಮನೆಯಲ್ಲಿರುವುದನ್ನು ಗಮನಿಸಿದ ದರೋಡೆಕೊರನೊಬ್ಬ ದಂಪತಿ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿ ಒಡವೆ ಮತ್ತು ಹಣ ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ತಮಿಳುನಾಡು ಮೂಲದ ಶ್ರೀನಿವಾಸ್‍ನ್ (32) ಎನ್ನಲಾಗಿದೆ. ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಅತ್ತಿಬೆಲೆಯ ಗೋಲ್ಡನ್ ಗೇಟ್ ಬಡಾವಣೆಯಲ್ಲಿ ಮುನೀರೆಡ್ಡಿ ಮತ್ತು ಜಯ್ಯಮ್ಮ ವೃದ್ಧ ದಂಪತಿ ವಾಸವಾಗಿದ್ದರು.
ಆರೋಪಿ ಶ್ರೀನಿವಾಸನ್ ಇದೇ ತಿಂಗಳ 21 ರಂದು ವೃದ್ಧ ದಂಪತಿ ಇಬ್ಬರೇ ಇರುವುದನ್ನು ಗಮನಿಸಿದ್ದನು. ಕೊನೆಗೆ ಅಂದು ಸಂಜೆ ವೇಳೆ ಮನೆಗೆ ನುಗ್ಗಿ ಮಾರಾಕಾಸ್ತ್ರಗಳಿಂದ ವೃದ್ಧ ದಂಪತಿಯ ಮೇಲೆ ಹಲ್ಲೆ ನಡೆಸಿ ಕೈಗೆ ಸಿಕ್ಕ ಚಿನ್ನಾಭರಣ ಹಾಗೂ ಹಣವನ್ನು ದರೋಡೆ ಮಾಡಿ ಪರಾರಿಯಾಗಿದ್ದನು. ಈ ಕುರಿತು ಅತ್ತಿಬೆಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಪತ್ತೆ ಹಚ್ಚಿ ವಿಚಾರಣೆ ನಡೆಸಿದ್ದಾರೆ.
ಆರೋಪಿ ತಮಿಳುನಾಡಿನಲ್ಲಿ ಕೊಲೆಯೊಂದನ್ನು ಮಾಡಿರುವ ಬಗ್ಗೆ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಈ ಸಂಬಂಧ ತಮಿಳುನಾಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.