ಬಳ್ಳಾರಿ: ಕಟಾವು ಮಾಡಿದ ತೊಗರಿ, ಗೋಧಿ ಸೇರಿದಂತೆ ಹಲವು ಬೆಳೆಗಳನ್ನು ಹಳ್ಳಿಯಲ್ಲಿನ ರೈತರು ರಸ್ತೆಗೆ ಹಾಕುವುದು ಸಾಮಾನ್ಯ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುವುದೂ ಸತ್ಯ. ಈ ಕುರಿತು ಎಷ್ಟೇ ಹೇಳಿದರೂ ಕೇಳದ ರೈತರಿಂದ ಬೇಸತ್ತು ಪಿಎಸ್‍ಐಯೊಬ್ಬರು ರಸ್ತೆಯಲ್ಲಿ ಹಾಕಿದ್ದ ತೊಗರಿ ಬೆಳೆಗೆ ಬೆಂಕಿ ಹಚ್ಚಲು ಮುಂದಾಗಿದ್ದಾರೆ.
ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಡಗಲಿ ರಸ್ತೆಯಲ್ಲಿ ಘಟನೆ ನಡೆದಿದ್ದು, ರೈತರು ತೊಗರಿ ಬೆಳೆ ಕಟಾವು ಮಾಡಿ, ರಸ್ತೆಯಲ್ಲಿ ಹಾಕಿದ್ದಾರೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿತ್ತು. ಈ ಕುರಿತು ರೈತರಿಗೆ ಹರಪನಹಳ್ಳಿ ಪಿಎಸ್‍ಐ ಶ್ರೀಧರ್ ಸಾಕಷ್ಟು ಬಾರಿ ಹೇಳಿದರೂ, ರಸ್ತೆಯಲ್ಲೇ ತೊಗರಿ ಹಾಕಿಕೊಂಡು ಒಣಗಿಸುತ್ತಿದ್ದರು.
Advertisement
Advertisement
ಇದರಿಂದ ಬೇಸತ್ತ ಪಿಎಸ್‍ಐ ಶ್ರೀಧರ್ ರಸ್ತೆಯಲ್ಲಿ ಹಾಕಿದ್ದ ತೊಗರಿಗೆ ಬೆಂಕಿ ಹಚ್ಚಲು ಹೋಗಿದ್ದಾರೆ. ಬೆಂಕಿ ಹಚ್ಚಲು ಹೋಗುತ್ತಿದ್ದಂತೆ ರೈತರು ಅಂಗಲಾಚಿ ಬೇಡಿಕೊಂಡಿದ್ದಾರೆ. ಪಿಎಸ್‍ಐ ಬೆಂಕಿ ಹಚ್ಚಲು ಯತ್ನಿಸಿದ ದೃಶ್ಯ ಮೊಬೈಲಿನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
Advertisement
ಕೂಲಿ ಕಾರ್ಮಿಕರು ಸಿಗದ ಹಿನ್ನೆಲೆ ರೈತರು ತೊಗರಿ, ಗೋಧಿ, ಸಜ್ಜೆ, ನವಣೆಗಳನ್ನು ರಸ್ತೆಗೆ ಹಾಕಿ ಬಿಡಿಸುತ್ತಾರೆ. ಅಲ್ಲದೆ ಒಣಗಿಸಲು ಸಹ ಹಾಕುತ್ತಾರೆ. ಆದರೆ ರೈತರ ಈ ಪದ್ಧತಿಯಿಂದಾಗಿ ವಾಹನ ಸವಾರರಿಗೆ ಸಾಕಷ್ಟು ತೊಂದರೆಯಾಗುತ್ತದೆ. ಹೀಗಾಗಿ ಪೊಲೀಸರು ರೈತರಿಗೆ ಮನವಿ ಮಾಡುತ್ತಾರೆ. ಆದರೆ ರೈತರು ಒಕ್ಕಲು ಮಾಡಲು ಆಳು ಸಿಗದ ಕಾರಣ ಈ ಪದ್ಧತಿ ಅನಿವಾರ್ಯ ಎಂಬಂತಾಗಿದೆ.