ಚಿತ್ರದುರ್ಗ: ಜಿಲ್ಲೆಯ ಭರಮಸಾಗರ ರಾಷ್ಟ್ರೀಯ ಹೆದ್ದಾರಿಯಲ್ಲಿನ ಕುಲಕುಂಟೆ ಗ್ರಾಮದ ಬಳಿ ಕಾರೊಂದು ರಸ್ತೆ ವಿಭಜಕಕ್ಕೆ ಬಡಿದು ಅಪಘಾತ ಸಂಭವಿಸಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರು ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲು ನೆರವಾಗಿ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಾನವೀಯತೆ ಮೆರೆದಿದ್ದಾರೆ.
Advertisement
ಇಂದು ಹುಬ್ಬಳ್ಳಿಯಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಬಳಿಕ ಏಪ್ರಿಲ್ 11 ರಿಂದ 14ರವರೆಗೆ ಆಸ್ಸಾಂ ರಾಜ್ಯದ ಗೌಹಾಟಿಯಲ್ಲಿ ನಡೆಯಲಿರುವ ಅಖಿಲ ಭಾರತ ಪೀಠಾಸೀನ ಅಧಿಕಾರಿಗಳ ಸಮಾವೇಶದಲ್ಲಿ ಪಾಲ್ಗೊಳ್ಳಲು ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ಭರಮಸಾಗರ ಕುಲಕುಂಟೆ ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ತಮ್ಮ ಕಣ್ಣೆದುರಿಗೆ ಸಂಭವಿಸಿದ ಭಾರೀ ರಸ್ತೆ ಅಪಘಾತವನ್ನು ಗಮನಿಸಿ ಕೂಡಲೇ ತಮ್ಮ ವಾಹನ ನಿಲ್ಲಿಸಿ ಗಾಯಾಳುಗಳಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ನೀಡಲು ಸಹಕರಿಸಿದ್ದಾರೆ. ಇದನ್ನೂ ಓದಿ: ಅಂಜನಾದ್ರಿಗೆ ಇಂಗ್ಲೆಂಡ್ ದೇಶದ ರಾಯಭಾರಿ ಭೇಟಿ
Advertisement
Advertisement
ಇಡಗುಂಜಿ ದೇವಸ್ಥಾನದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವರದರಾಜ, ಮಂಜುನಾಥ, ನಾಗೇಂದ್ರ ರಾವ್ ಮತ್ತು ಮೋಹನ್ ಕುಮಾರ ಅಪಘಾತದಲ್ಲಿ ಗಾಯಾಗೊಂಡವರಾಗಿದ್ದು, ಹೊರಟ್ಟಿ ಕೂಡಲೇ ಸ್ಥಳೀಯ ಪೊಲೀಸರಿಗೆ ಮತ್ತು ಆಸ್ಪತ್ರೆಗೆ ಕರೆ ಮಾಡಿ ಬೇಗನೆ ಸ್ಥಳಕ್ಕೆ ಆಂಬುಲೆನ್ಸ್ ಕರೆಸಿದರು. ಸುಮಾರು 45 ನಿಮಿಷಗಳಿಗೂ ಹೆಚ್ಚು ಕಾಲ ಅಪಘಾತ ಸ್ಥಳದಲ್ಲಿಯೇ ಇದ್ದು ಗಾಯಾಳುಗಳಿಗೆ ಧೈರ್ಯ ಹೇಳಿ ಅವರಿಗೆ ತುರ್ತು ಚಿಕಿತ್ಸೆ ಕೊಡಿಸುವಲ್ಲಿ ಶ್ರಮಿಸಿದ ಸಭಾಪತಿಗಳ ಸೇವಾ ಮನೋಭಾವ ಕಂಡು ಅಪಘಾತ ಸ್ಥಳದಲ್ಲಿ ನೆರೆದಿದ್ದ ಸುತ್ತಮುತ್ತಲಿನ ಗ್ರಾಮಸ್ಥರು ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ: ಚೊಂಬು ಹಿಡ್ಕೊಂಡು ಬಯಲಿನಲ್ಲಿ ಹೋದರೆ ಅವರಿಗೆ ಆನಂದ: ಈಶ್ವರಪ್ಪ ಅಪಹಾಸ್ಯ
Advertisement
ಬಸವರಾಜ ಹೊರಟ್ಟಿ ಸಂವಿಧಾನಾತ್ಮಕವಾಗಿರುವ ದೊಡ್ಡ ಹುದ್ದೆಯಲ್ಲಿದ್ದರೂ ಜನಸಾಮಾನ್ಯರ ಕಷ್ಟಗಳಿಗೆ ಕೂಡಲೇ ಪ್ರತಿಸ್ಪಂದಿಸಿ ನೆರವಾಗುವ ಮಾನವೀಯತೆಯ ಗುಣ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದ್ದು ಇಂದಿನ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ.