ದಾವಣಗೆರೆ: ನಿಂತಿದ್ದ ಟ್ರ್ಯಾಕ್ಟರ್‌ಗೆ (Tractor) ಬೈಕ್ ಡಿಕ್ಕಿ ಹೊಡೆದು, ಬೈಕ್ (Bike) ಸವಾರ ಸಾವನ್ನಪ್ಪಿದ ಘಟನೆ ಹಾವೇರಿ (Haveri) ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡದ ಬಳಿ ನಡೆದಿದೆ.
ಮೃತರನ್ನು ಸಂಜಯ್ (28) ಎಂದು ಗುರುತಿಸಲಾಗಿದೆ. ಇವರು ಮೂಲತಃ ದಾವಣಗೆರೆ (Davanagere) ಜಿಲ್ಲೆಯ ಹರಿಹರ ತಾಲೂಕಿನ ಜಿಗಳಿ ಗ್ರಾಮದ ಮಠದವರಾಗಿದ್ದರು. ನ. 28ರಂದು ಬೈಲಹೊಂಗಲದ ಪ್ರೀತಿ ಎಂಬವರನ್ನು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಸಮುದಾಯ ಭವನದಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದ್ದರು. ಇವರಿಬ್ಬರು ಕೂಡ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಹನಿಮೂನ್‌ಗೆಂದು ಬೈಕ್‌ನಲ್ಲಿ ಡಿ. 10ಕ್ಕೆ ಹರಿಹರದ ಜಿಗಳಿಯಿಂದ ಧಾರ್ಮಿಕ ಕ್ಷೇತ್ರಗಳಿಗೆ ಬೈಕ್‌ನಲ್ಲಿ ಎರಡು ದಿನಗಳ ಕಾಲ ಹೋಗಿದ್ದರು.
ಮೊದಲು ಸಾಗರ ತಾಲೂಕಿನ ಸಿಂಗಧೂರು ದೇವಿ ದರ್ಶನ ಪಡೆದಿದ್ದಾರೆ. ಬಳಿಕ ಮುರುಡೇಶ್ವರಕ್ಕೆ ಹೋಗಿ ರಾತ್ರಿ ತಂಗಿದ್ದಾರೆ. ಡಿಸೆಂಬರ್ 11ಕ್ಕೆ ಶಿರಸಿಗೆ ಬಂದು ಅಲ್ಲಿ ಮಾರಿಕಾಂಬಾ ದೇವಿ ದರ್ಶನ ಪಡೆದು ವಾಪಸ್ಸು ಜಿಗಳಿಗೆ ಹೋಗುತ್ತಿರುವಾಗ ಈ ಅವಘಡ ಸಂಭವಿಸಿದೆ. ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಕೋಡದ ಬಳಿ ಬರುವಾಗ ನಿಂತಿದ್ದ ಕಬ್ಬಿನ ಟ್ರ್ಯಾಕ್ಟರ್‌ಗೆ ಬೈಕ್ ಡಿಕ್ಕಿ ಹೊಡೆದಿದೆ.
ಪರಿಣಾಮ ಬೈಕ್ ಸವಾರ ಸಂಜಯ್ ತಲೆಗೆ ತೀವ್ರ ಪೆಟ್ಟಾಗಿದ್ದು, ಎರಡೂ ಕಿವಿಯಲ್ಲಿ ರಕ್ತಸ್ರಾವವಾಗಿದೆ. ಜೊತೆಗೆ ಬೈಕ್‌ನಲ್ಲಿದ್ದ ಪ್ರೀತಿಗೂ ಗಂಭೀರ ಗಾಯಗಳಾಗಿದೆ. ಘಟನೆ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಹಂಸಬಾವಿ ಪೊಲೀಸರು ಗಾಯಗೊಂಡ ದಂಪತಿಯನ್ನು ರಾಣೆಬೆನ್ನೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆಗಾಗಿ, ದಾವಣಗೆರೆ ಬಾಪೂಜಿ ಆಸ್ಪತ್ರೆಗೆ ಕರೆದುಕೊಂಡು ಬರುವ ವೇಳೆ ದಾರಿ ಮಧ್ಯೆ ಸಂಜಯ್ ಮೃತಪಟ್ಟಿದ್ದಾರೆ. ಪತ್ನಿ ಪ್ರೀತಿಯ ಎರಡು ಕೈ ಹಾಗೂ ತಲೆಗೆ ಮತ್ತು ಸೊಂಟಕ್ಕೆ ತೀವ್ರ ಪೆಟ್ಟಾಗಿದೆ. ಸದ್ಯ ದಾವಣಗೆರೆ ಬಾಪೂಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇನ್ನು ಸಂಜಯ್ ಶವ ಪರೀಕ್ಷೆ ನಂತರ ತನ್ನ ಗಂಡ ಸಂಜಯ್ ನೋಡಲು ಪ್ರೀತಿ ಸ್ಟ್ರೆಚರ್ನಲ್ಲಿ ಶವಾಗಾರಕ್ಕೆ ಬಂದಿದ್ದರು. ಬಳಿಕ ಸ್ಟ್ರೆಚರ್ ನಲ್ಲಿದ್ದುಕೊಂಡೇ ತನ್ನ ಗಂಡನ ಮುಖ ಸವರಿ ದುಃಖಿಸಿದ ಕ್ಷಣ ಮನಕಲಕುವಂತಿತ್ತು.