– 2 ಚಿನ್ನದ ಪದಕ ಗೆದ್ದ ಋತ್ವಿಕ್
ಬೆಂಗಳೂರು: ಕಾಮನ್ ವೆಲ್ತ್ ಗೇಮ್‍ನಲ್ಲಿ ಕನ್ನಡಿಗ ಋತ್ವಿಕ್ ಅಲೆವೂರಾಯ ಎರಡು ಚಿನ್ನದ ಪದಕ ಗೆದ್ದು ಕೀರ್ತಿ ತಂದಿದ್ದಾರೆ.
ಕೆನಡಾದ ಸೈಂಟ್ ಜಾನ್ಸ್‌ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಅಂತಾರಾಷ್ಟ್ರೀಯ ಬೆಂಚ್ ಪ್ರೆಸ್ ಪವರ್ ಲಿಫ್ಟ್ ಚಾಂಪಿಯನ್‍ಶಿಪ್‍ನಲ್ಲಿ ಋತ್ವಿಕ್ ಸ್ಪರ್ಧಿಸಿದ್ದರು. ಈ ಚಾಂಪಿಯನ್‍ಶಿಪ್‍ನಲ್ಲಿ ಋತ್ವಿಕ್ ಎರಡು ಚಿನ್ನದ ಪದಕವನ್ನು ಗೆದ್ದು ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಮಂಗಳವಾರ ನಡೆದ ಸ್ಪರ್ಧೆಯಲ್ಲಿ 83 ಕಿಲೋ ಸಬ್ ಜೂನಿಯರ್ ವಿಭಾಗದಲ್ಲಿ ಋತ್ವಿಕ್ ಭಾರತದಿಂದ ಪ್ರತಿನಿಧಿಸಿ ಎರಡು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕ್ಲಾಸಿಕ್ ಹಾಗೂ ಎಕ್ವಿಡ್ ವಿಭಾಗದಲ್ಲಿ ಭಾರ ಎತ್ತಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಪ್ರಶಂಸೆಗೆ ಭಾಜನರಾಗಿದ್ದಾರೆ. ಮೂಲತಃ ಮಂಗಳೂರಿನವರಾದ ಋತ್ವಿಕ್, ವಾಸುದೇವ ಭಟ್ ಹಾಗೂ ದೀಪಾ ದಂಪತಿ ಪುತ್ರ. ಋತ್ವಿಕ್ ಅವರು ತರಬೇತಿಗಾರ ಪ್ರದೀಪ್ ಆಚಾರ್ಯ ಅವರಿಂದ ತರಬೇತಿ ಪಡೆಯುತ್ತಿದ್ದು, ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.