ಲಕ್ನೋ: ಐಪಿಎಲ್ (IPL) ಮುಗಿಯಲು ಇನ್ನು ಎರಡು ದಿನ ಬಾಕಿ ಇರುವಾಗಲೇ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ನಾಯಕತ್ವ ಸ್ಥಾನದಿಂದ ರಿಷಭ್ ಪಂತ್(Rishabh Pant) ಕೆಳಗಿಳಿದಿದ್ದಾರೆ.
2026ರ ಐಪಿಎಲ್ ಆವೃತ್ತಿಯಲ್ಲಿ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದ ಬೆನ್ನಲ್ಲೇ ಪಂತ್ ಈ ನಿರ್ಧಾರ ಕೈಗೊಂಡಿದ್ದಾರೆ.
ಐಪಿಎಲ್ 2026ರ ಸರಣಿ ಮುಕ್ತಾಯದ ನಂತರ, ರಿಷಭ್ ಪಂತ್ ತಾವಾಗಿಯೇ ನಾಯಕತ್ವದ ಜವಾಬ್ದಾರಿಯಿಂದ ಮುಕ್ತಿ ನೀಡುವಂತೆ ಲಕ್ನೋ ಫ್ರಾಂಚೈಸಿಗೆ ವಿನಂತಿಸಿದ್ದರು. ಪಂತ್ ಅವರ ಈ ಮನವಿಯನ್ನು ಗೌರವಿಸಿರುವ ಫ್ರಾಂಚೈಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರ ವಿನಂತಿಯನ್ನು ಸ್ವೀಕರಿಸಿದೆ.
ಪಂತ್ ನಾಯಕತ್ವದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಈ ಸೀಸನ್‌ನಲ್ಲಿ ಆಡಿದ 14 ಪಂದ್ಯಗಳಲ್ಲಿ ಕೇವಲ 4 ಪಂದ್ಯಗಳನ್ನು ಮಾತ್ರ ಗೆದ್ದು, ಅಂಕಪಟ್ಟಿಯಲ್ಲಿ 10ನೇ ಸ್ಥಾನ ಪಡೆದುಕೊಂಡಿತ್ತು.

ನಾಯಕತ್ವದ ಒತ್ತಡದಿಂದಾಗಿ ಪಂತ್ ಅವರ ಬ್ಯಾಟಿಂಗ್ ಪ್ರದರ್ಶನವೂ ಕುಂಠಿತಗೊಂಡಿತ್ತು. ಈ ಸೀಸನ್‌ನ 14 ಇನ್ನಿಂಗ್ಸ್‌ನಲ್ಲಿ ಅವರು 28.36ರ ಸರಾಸರಿಯಲ್ಲಿ ಕೇವಲ 312 ರನ್ ಗಳಿಸಿದ್ದರೆ ಕಳೆದ ಬಾರಿ 14 ಇನ್ನಿಂಗ್ಸ್‌ನಲ್ಲಿ 24.45 ಸರಾಸರಿಯಲ್ಲಿ 269 ರನ್ ಹೊಡೆದಿದ್ದರು.
2025ರ ಮೆಗಾ ಹರಾಜಿನಲ್ಲಿ ಲಕ್ನೋ ಫ್ರಾಂಚೈಸಿಯು ಪಂತ್ ಅವರನ್ನು ಬರೋಬ್ಬರಿ 27 ಕೋಟಿ ರೂ. ನೀಡಿ ಖರೀದಿಸಿ ನಾಯಕನನ್ನಾಗಿ ಮಾಡಿತ್ತು. ಆದರೆ ಸತತ ಎರಡು ಸೀಸನ್‌ಗಳಲ್ಲಿ ತಂಡ ಪ್ಲೇಆಫ್ ತಲುಪುವಲ್ಲಿ ವಿಫಲವಾಗಿತ್ತು.
ಲಕ್ನೋ ತಂಡದ ಕ್ರಿಕೆಟ್ ನಿರ್ದೇಶಕ ಟಾಮ್ ಮೂಡಿ ಈ ಕುರಿತು ಪ್ರತಿಕ್ರಿಯಿಸಿ, “ರಿಷಭ್ ಅವರೇ ನಮ್ಮನ್ನು ಸಂಪರ್ಕಿಸಿ ಈ ಮನವಿ ಮಾಡಿಕೊಂಡರು, ನಾವು ಅದನ್ನು ಗೌರವಪೂರ್ವಕವಾಗಿ ಒಪ್ಪಿದ್ದೇವೆ. ತಂಡವನ್ನು ಪುನರ್ರಚಿಸಲು ಮತ್ತು ಮುಂಬರುವ ಸೀಸನ್‌ಗೆ ಬಲಿಷ್ಠವಾಗಿ ಸಿದ್ಧಗೊಳಿಸಲು ಇದು ನೆರವಾಗಲಿದೆ” ಎಂದು ತಿಳಿಸಿದ್ದಾರೆ. ಮುಂಬರುವ ದಿನಗಳಲ್ಲಿ ತಂಡದ ಹೊಸ ನಾಯಕನನ್ನು ಘೋಷಿಸಲಾಗುವುದು ಎಂದು ಫ್ರಾಂಚೈಸಿ ಹೇಳಿದೆ.
ಇತ್ತೀಚೆಗೆ ಭಾರತ ಟೆಸ್ಟ್ ತಂಡದ ಉಪನಾಯಕತ್ವ ಸ್ಥಾನದಿಂದಲೂ ಪಂತ್ ಅವರನ್ನು ಕೈಬಿಟ್ಟು ಕೆ.ಎಲ್. ರಾಹುಲ್ ಅವರಿಗೆ ಜವಾಬ್ದಾರಿ ನೀಡಲಾಗಿತ್ತು. ಹೀಗಾಗಿ ಪಂತ್ ಸದ್ಯ ತಮ್ಮ ಬ್ಯಾಟಿಂಗ್ ಹಾಗೂ ಕೀಪಿಂಗ್ ಫಾರ್ಮ್ ಮೇಲೆ ಹೆಚ್ಚಿನ ಗಮನ ಹರಿಸಲು ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗುತ್ತಿದೆ.
