ಕಾಂತಾರ ಸಿನಿಮಾದ ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ತಮ್ಮ ಕುಟುಂಬ ಹಾಗೂ ಚಿತ್ರತಂಡದ ಜೊತೆಗೆ ದೈವಕೋಲದಲ್ಲಿ ಭಾಗಿಯಾಗಿದ್ದಾರೆ. ಮಂಗಳೂರಿನ ಬಾರೆಬೈಲ್‌ನಲ್ಲಿ ಇರುವ ದೈವಸ್ಥಾನದಲ್ಲಿ ಹೊತ್ತ ಹರಕೆಯನ್ನ ತೀರಿಸಿದ್ದಾರೆ. ಕಾಂತಾರ ಚಾಪ್ಟರ್-1 ಶೂಟಿಂಗ್ ವೇಳೆ ಹಲವಾರು ವಿಘ್ನಗಳು ಚಿತ್ರತಂಡಕ್ಕೆ ಎದುರಾಗಿದ್ದವು. ಈ ವೇಳೆ ಹೊಂಬಾಳೆ ಸಂಸ್ಥೆ (Hombale Films) ಹಾಗೂ ರಿಷಬ್ ಶೆಟ್ಟಿ ಸಾಕಷ್ಟು ಕಡೆ ಹರಕೆಯನ್ನ ಹೊತ್ತಿದ್ದರು. ಇದೀಗ ಹೊಂಬಾಳೆ ನಿರ್ಮಾಣ ಸಂಸ್ಥೆಯ ನಿರ್ಮಾಪಕರಾದ ವಿಜಯ್ ಕಿರಗಂದೂರು, ನಿರ್ದೇಶಕ ಸಂತೋಷ್ ಆನಂದ್‌ರಾಮ್, ಅಜನೀಶ್ ಲೋಕನಾಥ್ ಹಾಗೂ ರಿಷಬ್ ಕುಟುಂಬ ಆಗಮಿಸಿ ದೈವದ ಹರಕೆಯನ್ನ ತೀರಿಸಿದ್ದಾರೆ.
ರಿಷಬ್ ಶೆಟ್ಟಿ ಹಾಗೂ ಕಾಂತಾರ (Kantara) ಚಿತ್ರತಂಡ ಹರಕೆ ನೇಮೋತ್ಸವನ್ನ ನೆರವೇರಿಸಿದ್ದಾರೆ. ಗಗ್ಗರ ಸೇವೆ ಜೊತೆಗೆ ಅನ್ನಸಂತರ್ಪಣೆ ಕಾರ್ಯದಲ್ಲಿ ಕಾಂತಾರ ಚಿತ್ರತಂಡ ಭಾಗಿಯಾಗಿತ್ತು. ಇದರಿಂದ ಸಂತುಷ್ಟಗೊಂಡ ದೈವ ರಿಷಬ್ ಮಡಿಲಲ್ಲಿ ಮಲಗಿ ಅಭಯ ನೀಡಿದೆ. ರಿಷಬ್ ಹಾಗೂ ವಿಜಯ್ ಕಿರಗಂದೂರು ಕೈಹಿಡಿದು ಮಲಗಿ ಪರೋಕ್ಷವಾಗಿ ರಿಷಬ್ ಹಾಗೂ ತಂಡಕ್ಕೆ ಆಶೀರ್ವಾದ ನೀಡಿದೆ. ಇದನ್ನೂ ಓದಿ: ಕಣ್ಣೀರು ಸುರಿಸಬೇಡ ನಿನ್ನ ಹಿಂದೆ ನಾನಿದ್ದೇನೆ – ರಿಷಬ್‌ಗೆ ಪಂಜುರ್ಲಿ ಅಭಯ
ದೈವದ ಅಭಯ ಸಿಗುತ್ತಿದ್ದಂತೆ ರಿಷಬ್ ಶೆಟ್ಟಿ ಕಾಂತಾರ ಪಾರ್ಟ್-3 ಸಿನಿಮಾಗೆ ಓಂಕಾರ ಹಾಕಲಿದ್ದಾರೆ ಎನ್ನಲಾಗುತ್ತಿದೆ. ಕಾಂತಾರ ಚಾಪ್ಟರ್-1 ಬಳಿಕ ರಿಷಬ್ ಶೆಟ್ಟಿ ಪಾರ್ಟ್-3 ಮಾಡಲು ಯೋಚಿಸುತ್ತಿದ್ದರು. ದೈವದ ಅಭಯ ಸಿಕ್ಕಮೇಲೆ ಧೈರ್ಯದಿಂದ ಮುನ್ನುಗ್ಗಲು ತಯಾರಿ ಮಾಡಿಕೊಳ್ಳಲಿದ್ದಾರೆ. ಭಾರತೀಯ ಚಿತ್ರರಂಗದಲ್ಲಿ ಮತ್ತೊಂದು ಮುನ್ನುಡಿ ಬರೆಯಲು ಟೀಮ್ ರೆಡಿಯಾಗಲಿದೆ. ಸದ್ಯದಲ್ಲಿಯೇ ಕಾಂತಾರ ಅಡ್ಡಾದಿಂದ ನಯಾ ಸಮಾಚಾರ ಹೊರ ಬೀಳುವ ನಿರೀಕ್ಷೆ ಇದೆ.

