– ಧ್ಯಾನ ಮಾಡುವಾಗ ಉಗ್ರರ ಬಗ್ಗೆ ಗೊತ್ತಾಯಿತು
– ಕರೆಯ ಬೆನ್ನಲ್ಲೇ 8 ರಾಜ್ಯಗಳಿಗೆ ಪತ್ರ ಬರೆದಿದ್ದ ನೀಲಮಣಿ ರಾಜು
ಬೆಂಗಳೂರು: ದಕ್ಷಿಣ ಭಾರತದಲ್ಲಿ 19 ಮಂದಿ ಉಗ್ರರು ರೈಲಿನಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದಾರೆ ಎಂದು ಎಂದು ಸುಳ್ಳು ಕರೆ ಮಾಡಿದ್ದ ಮಾಜಿ ಸೈನಿಕನನ್ನು ಆವಲಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಸ್ವಾಮಿ ಸುಂದರ್‌ಮೂರ್ತಿ ಶುಕ್ರವಾರ ಸಂಜೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಉಗ್ರರು ದಾಳಿ ಮಾಡಲು ಸಂಚು ರೂಪಿಸಿದ್ದಾರೆ ಎಂದು ಹೇಳಿದ್ದ. ಕರೆ ಬಂದ ನಂತರ ಪೊಲೀಸರು ಸುಂದರ್‌ಮೂರ್ತಿಯನ್ನು ಹುಡುಕಲು ಪ್ರಾರಂಭಿಸಿದ್ದರು. ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಅವಲಹಳ್ಳಿ ಪೊಲೀಸರು ಮುನಿವೆಂಕಟೇಶ್ವರ ಲೇಔಟ್ ಮನೆಯಲ್ಲಿ ಸುಂದರ್‌ಮೂರ್ತಿಯನ್ನು ಬಂಧಿಸಿದ್ದಾರೆ.
Advertisement
ವಿಚಾರಣೆ ವೇಳೆ ಆರೋಪಿ ಸುಂದರ ಮೂರ್ತಿ, ನಾನು ಧ್ಯಾನ ಮಾಡುತ್ತೇನೆ. ಧ್ಯಾನ ಮಾಡಿದಾಗ ನನಗೆ 19 ಜನ ಉಗ್ರರು ಬಂದಿದ್ದಾರೆ ಎನ್ನುವುದು ತಿಳಿಯಿತು. ರಾಮನಾಥಪುರಂನಲ್ಲಿ ಬ್ಲಾಸ್ಟ್ ಮಾಡುತ್ತಾರೆ ಎನ್ನುವುದು ಗೊತ್ತಾಯಿತು. ಅದಕ್ಕಾಗಿ ಎಚ್ಚರಿಕೆ ನೀಡಲು ಕರೆ ಮಾಡಿದೆ ಎಂದು ಸುಂದರ್ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ.
Advertisement
Advertisement
ಕೋಲಾರ ಎಸ್‍ಪಿ ಹಾಗೂ ಬೆಂಗಳೂರು ಗ್ರಾಮಾಂತರ ಪೊಲೀಸರು ಆರೋಪಿಯನ್ನು ಬಂಧಿಸಲು ಶುಕ್ರವಾರ ರಾತ್ರಿ ತೀವ್ರ ಹುಡುಕಾಟ ನಡೆಸಿದ್ದಾರೆ. ಆರೋಪಿ ಕಂಟ್ರೋಲ್ ರೂಮಿಗೆ ಕರೆ ಮಾಡಿ ನಂತರ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ. ಹೀಗಾಗಿ ಆತನ ಬಂಧನ ಸ್ವಲ್ಪ ಕಷ್ಟವಾಗಿತ್ತು. ಬಳಿಕ ಬೆಂಗಳೂರು ಗ್ರಾಮಾಂತರ ಪೊಲೀಸರ ತಂಡ ಆರೋಪಿಯ ಮೊಬೈಲ್ ಕರೆ ಲೊಕೇಶನ್ ಆಧರಿಸಿ ಆತನನ್ನು ಬಂಧಿಸಿದ್ದಾರೆ.
Advertisement
ಸುಂದರ್‌ಮೂರ್ತಿ ಸೇನೆಯಲ್ಲಿ ಚಾಲಕನಾಗಿ 20 ವರ್ಷ ಸೇವೆ ಸಲ್ಲಿಸಿದ್ದಾನೆ. ಬಳಿಕ ಸ್ವಯಂ ನಿವೃತ್ತಿ ಪಡೆದುಕೊಂಡು ಸ್ವಗ್ರಾಮಕ್ಕೆ ಹಿಂತಿರುಗಿ ಬಂದಿದ್ದನು. ಸದ್ಯ ಲಾರಿ ಚಾಲಕನಾಗಿ ಕೆಲಸ ಮಾಡುತ್ತಿರುವ ಸುಂದರ್‌ಮೂರ್ತಿ ಇಬ್ಬರು ಮಕ್ಕಳು ಕೂಡ ಸೈನಿಕರಾಗಿದ್ದು, ಅದರಲ್ಲಿ ಒಬ್ಬ ಮಗ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾಗಿದ್ದಾರೆ. ಸದ್ಯ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಸುಂದರ ಮೂರ್ತಿ ವಿಚಾರಣೆ ನಡೆಸಿ ಆತನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ವಿಚಾರಣೆಗೆಗಾಗಿ ವಿಧಾನಸೌಧ ಠಾಣೆಗೆ ಆರೋಪಿಯನ್ನು ಹಸ್ತಾಂತರ ಮಾಡಲಾಗಿದೆ.
ಶುಕ್ರವಾರ ಸಂಜೆ ಸುಂದರ್‌ಮೂರ್ತಿ ಬೆಂಗಳೂರಿನ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ರೈಲಿನಲ್ಲಿ ದಾಳಿ ನಡೆಸಲು ಉಗ್ರರು ಪ್ಲಾನ್ ಮಾಡಿದ್ದಾರೆ. 19 ಮಂದಿ ಉಗ್ರರು ರಾಮನಾಥಪುರಂನಲ್ಲಿದ್ದಾರೆ ಎಂದು ತಿಳಿಸಿದ್ದ.
ಈ ಕರೆಯ ಬೆನ್ನಲ್ಲೇ ತಮಿಳುನಾಡು, ಗೋವಾ, ಕೇರಳ, ಆಂಧ್ರ, ಮಹಾರಾಷ್ಟ್ರ, ತೆಲಂಗಾಣ, ಪುದುಚೆರಿಗಳು ಉಗ್ರರ ಟಾರ್ಗೆಟ್ ಆಗಿವೆ ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಈ ರಾಜ್ಯಗಳಿಗೆ ಪತ್ರ ಬರೆದು ತಮಿಳುನಾಡಿನ ರಾಮನಾಥಪುರಂನಲ್ಲಿ 19 ಮಂದಿ ಉಗ್ರರು ಅಡಗಿದ್ದಾರೆ ಅಂತಾ ಎಚ್ಚರಿಸಿದ್ದರು.
ಕರೆ ಬಂದ ಬಳಿಕ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಹೈ ಅಲರ್ಟ್ ಘೋಷಿಸಲಾಗಿದೆ. ಮಂದಿರ, ಮಸೀದಿ, ಚರ್ಚ್, ಬಸ್ ನಿಲ್ದಾಣ, ರೈಲ್ವೆ ಸ್ಟೇಷನ್, ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ.