ಧಾರವಾಡ: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಡಿವೈಎಸ್‍ಪಿ ಪಿ.ಎಸ್ ಪಾಟೀಲ್ ಪುತ್ರ ಸೇರಿದಂತೆ 6 ಜನರ ತಂಡ ತಮ್ಮ ಸಂಬಂಧಿಕರ ಮೇಲೆ 2 ಸುತ್ತು ಗುಂಡು ಹಾರಿಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಧಾರವಾಡದಲ್ಲಿ ನಡೆದಿದೆ.
ಧಾರವಾಡದ ಕುಂದಗೋಳ ತಾಲೂಕಿನ ಹಿರೆಹರಕುಣಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಿವೃತ್ತ ಡಿವೈಎಸ್ಪಿ ಪುತ್ರರಾದ ಶರತ್ ಹಾಗೂ ಕಿಶೋರ್ ಎಂಬವರಿಂದ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಗೋವಿಂದಗೌಡ ಪಾಟೀಲ್ ಮತ್ತು ವೆಂಕನಗೌಡ ಪಾಟೀಲ್ ಎಂಬವರು ಹಲ್ಲೆಗೊಳಗಾಗಿದ್ದು, ಅದೃಷ್ಟವಶಾತ್ ಇಬ್ಬರೂ ಪ್ರಾಣಪಾಯದಿಂದ ಪಾರಾಗಿದ್ದಾರೆ. ಹಲ್ಲೆಗೊಳಗಾದವರು ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರೆದಿದೆ.
ಅಣ್ಣ-ತಮ್ಮಂದಿರ ನಡುವೆ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಜಗಳವಾಗುತ್ತಿತ್ತು. ಈ ವೇಳೆ ನಾವು ಅದನ್ನ ಮಾತಿನ ಮೂಲಕ ಬಗೆಹರಿಸಿಕೊಳ್ಳಿ ಅಂತಾ ಹೇಳಿದ್ವಿ. ಆದ್ರೆ ನಿವೃತ್ತ ಡಿವೈಎಸ್‍ಪಿ ಪುತ್ರರು ರೌಡಿಗಳನ್ನು ಕರೆದುಕೊಂಡು ಬಂದು ಹೊಡೆಸಿದ್ರು. ನಿವೃತ್ತ ಡಿವೈಸೆಪಿ ಪುತ್ರ ಕಿಶೋರ್ ಪಿಸ್ತೂಲ್ ಹಿಡ್ಕೊಂಡಿದ್ದ. ಇನ್ನೊಬ್ಬ ಶರತ್ ಬಂದೂಕು ಹಿಡಿದುಕೊಂಡು ನನ್ನ ಬಾಯಿಗೆ ಹೊಡೆದ ಅಂತಾ ಹಲ್ಲೆಗೊಳಗಾದ ವೆಂಕನಗೌಡ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.