LatestLeading NewsMain PostNational

ಆಹಾರ ಪದಾರ್ಥಗಳು ದುಬಾರಿ – ಚಿಲ್ಲರೆ ಹಣದುಬ್ಬರ ಶೇ.7ಕ್ಕೆ ಏರಿಕೆ

ನವದೆಹಲಿ: ಜುಲೈನಲ್ಲಿ ಶೇ. 6.71ರಷ್ಟಿದ್ದ ಭಾರತದ ಚಿಲ್ಲರೆ ಹಣದುಬ್ಬರವು(Retail Inflation) ಆಗಸ್ಟ್‌ನಲ್ಲಿ ಶೇ. 7ಕ್ಕೆ ಏರಿಕೆ ಕಂಡಿದೆ. ಮುಖ್ಯವಾಗಿ ಆಹಾರ ಪದಾರ್ಥಗಳ(Food items) ಬೆಲೆಯಲ್ಲಿ ಏರಿಕೆಯಾಗಿದೆ. ಸರ್ಕಾರದ ಅಂಕಿಅಂಶಗಳಿಂದ ತಿಳಿದುಬಂದಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳು ಸಹ ಚಿಲ್ಲರೆ ಹಣದುಬ್ಬರ ಏರುಮುಖವಾಗಿತ್ತು, ಜೂನ್‍ನಲ್ಲಿ ಈ ದರವು ಶೇ. 7.01ಕ್ಕೆ ತಲುಪಿತ್ತು. ಸತತ 8ನೇ ತಿಂಗಳು ಈ ದರವು ಶೇ. 6ರಕ್ಕಿಂತಲೂ ಅಧಿಕ ಮಟ್ಟದಲ್ಲಿ ಮುಂದುವರಿದಿದೆ. ಭಾರತೀಯ ರಿಸರ್ವ್ ಬ್ಯಾಂಕ್(RBI) (ಆರ್‌ಬಿಐ) ಚಿಲ್ಲರೆ ಹಣದುಬ್ಬರಕ್ಕೆ ಶೇ.6ರ ಮಿತಿ ನಿಗದಿಪಡಿಸಿದೆ.

ಆಹಾರ ಪದಾರ್ಥಗಳ ಹಣದುಬ್ಬರ ದರವು ಆಗಸ್ಟ್‌ನಲ್ಲಿ (August) ಶೇ. 7.62ಕ್ಕೆ ಹೆಚ್ಚಳವಾಗಿದೆ. ಈ ದರವು ಜುಲೈನಲ್ಲಿ ಶೇ. 6.75ಕ್ಕೆ ಇಳಿಕೆಯಾಗಿತ್ತು. ಮಳೆ ಹಾಗೂ ಬೆಳೆ ಹಾನಿಯ ಕಾರಣಗಳಿಂದ ತರಕಾರಿ(Vegetables) ಬೆಲೆ ಏರಿಕೆ ಆಗಿದ್ದು, ತರಕಾರಿ ಹಣದುಬ್ಬರವು ಆಗಸ್ಟ್‌ನಲ್ಲಿ ಶೇ 13.23ಕ್ಕೆ ತಲುಪಿದೆ. ಇದನ್ನೂ ಓದಿ: ಆಟೋ ಚಾಲಕನ ಮನೆಯಲ್ಲಿ ಊಟ ಮಾಡಿದ ಕೇಜ್ರಿವಾಲ್ – ರಿಕ್ಷಾದಲ್ಲೇ ಪ್ರಯಾಣಿಸಿ ಸರಳತೆ ಮೆರೆದ್ರು

ವಾರ್ಷಿಕ ಆಧಾರದ ಮೇಲೆ ತರಕಾರಿಗಳು, ಸಾಂಬಾರ್ ಪದಾರ್ಥಗಳು, ಪಾದರಕ್ಷೆಗಳು ಮತ್ತು ‘ಇಂಧನ ಮತ್ತು ಲೈಟ್’ ಬೆಲೆ ಏರಿಕೆಯ ದರವು ಶೇಕಡಾ 10 ಕ್ಕಿಂತ ಹೆಚ್ಚಾಗಿದೆ. ಕಳೆದ ತಿಂಗಳಿನಲ್ಲಿ ಮೊಟ್ಟೆಯ(Egg) ಮೇಲೆ ಹಣದುಬ್ಬರ ಕಡಿತವಾಗಿರುವುದು ಕಂಡುಬಂದಿದೆ. ‘ಮಾಂಸ ಮತ್ತು ಮೀನು’ಗಳ(Meat-Fish) ದರ ಬಹುತೇಕ ಸಮತಟ್ಟಾಗಿದೆ.

ಸತತ ಮೂರು ತ್ರೈಮಾಸಿಕಗಳಲ್ಲಿ ಸರಾಸರಿ ಹಣದುಬ್ಬರವು ಶೇ. 2ರಿಂದ 6ರ ಮಿತಿಯನ್ನು ದಾಟಿದೆ. ಹಣದುಬ್ಬರ ನಿಯಂತ್ರಿಸುವ ನಿಟ್ಟಿನಲ್ಲಿ ಆರ್‌ಬಿಐ ಮತ್ತೆ ರೆಪೋ ದರವನ್ನು ಏರಿಕೆ ಮಾಡುವ ಸಾಧ್ಯತೆ ಇದೆ. ರೆಪೋ ದರ ಹೆಚ್ಚಳವಾದರೆ, ಗೃಹ ಸಾಲ,(Home Loan) ವಾಹನ ಸಾಲ (Vehicle Loan) ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿ ದರಗಳನ್ನು(Interest Rate) ಬ್ಯಾಂಕ್‍ಗಳು ಮತ್ತೆ ಏರಿಕೆ ಮಾಡುತ್ತವೆ.

ಆಗಸ್ಟ್‌ನಲ್ಲಿ ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಭಾಗಗಳಲ್ಲಿ ಹಣದುಬ್ಬರವು ತೀವ್ರ ಏರಿಕೆ ಕಂಡಿದ್ದು, ಗ್ರಾಮೀಣ ಭಾಗದ ಹಣದುಬ್ಬರವು ಹಿಂದಿನ ಶೇ.6.8ರಿಂದ ಶೇ.7.15ಕ್ಕೆ ಹೆಚ್ಚಳವಾಗಿದೆ. ನಗರದ ಹಣದುಬ್ಬರವು ಶೇ.6.72ರಷ್ಟಿದೆ. ಇದನ್ನೂ ಓದಿ: ಸಚಿವ ಆನಂದ್ ಸಿಂಗ್, ಕಾರ್ಪೊರೇಟರ್ ನಡುವೆ ರಾಜೀನಾಮೆ ಸಮರ

ಜುಲೈನಲ್ಲಿ ಭಾರತದ ಕೈಗಾರಿಕಾ ಉತ್ಪಾದನೆಯು ಶೇ. 2.4 ರಷ್ಟು ಏರಿಕೆಯಾಗಿದೆ. 2021ರ ಜುಲೈನಲ್ಲಿ ಐಐಪಿ ಶೇ.11.5% ರಷ್ಟು ಬೆಳೆದಿದೆ. ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಆಫೀಸ್ (ಎನ್‍ಎಸ್‍ಒ) ಬಿಡುಗಡೆ ಮಾಡಿದ ಕೈಗಾರಿಕಾ ಉತ್ಪಾದನೆಯ ಸೂಚ್ಯಂಕ (ಐಐಪಿ) ದತ್ತಾಂಶದ ಪ್ರಕಾರ, ಉತ್ಪಾದನಾ ವಲಯದಲ್ಲಿನ ಉತ್ಪಾದನೆಯು 2022ರ ಜುಲೈನಲ್ಲಿ ಶೇ. 3.2 ರಷ್ಟು ಮುಟ್ಟಿದೆ. ಏಪ್ರಿಲ್ 2020ರಲ್ಲಿ ಕೊರೊನಾ ವೈರಸ್(Corona Virus) ಸೋಂಕಿನಿಂದಾಗಿ ವಿಧಿಸಲಾಗಿದ್ದ ಲಾಕ್‍ಡೌನ್ (Lockdown) ಹಿನ್ನೆಲೆ ಆರ್ಥಿಕ ಚಟುವಟಿಕೆಗಳಲ್ಲಿನ ಕುಸಿತದಿಂದಾಗಿ ಕೈಗಾರಿಕಾ ಉತ್ಪಾದನೆಯು ಶೇ. 57.3 ರಷ್ಟು ಕುಸಿದಿದೆ.

ಜನಸಾಮಾನ್ಯರಿಗೆ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಜತೆಗೆ ಅಕ್ಕಿ ದರ ಹೆಚ್ಚಳದ ಶಾಕ್ ಕೂಡಾ ಸದ್ದಿಲ್ಲದೆ ತಟ್ಟಿದೆ. ಸಾಮಾನ್ಯವಾಗಿ ಕೆಜಿಗೆ 1 ಅಥವಾ 2 ರೂ. ಏರಿಕೆಯಾಗುತ್ತಿದ್ದು, ಇದೇ ಮೊದಲ ಬಾರಿಗೆ ಕೇವಲ ಎರಡು ತಿಂಗಳಲ್ಲಿ ಕೆಜಿಗೆ 8-10 ರೂ.ವರೆಗೆ ಏರಿಕೆಯಾಗಿದೆ. ಜುಲೈ ಕೊನೆ ವಾರದಲ್ಲಿ ಇದ್ದ ಅಕ್ಕಿ ದರಕ್ಕೂ, ಈಗಿನ ದರಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ಅಸಹಜ ರೀತಿಯಲ್ಲಿ ಬೆಲೆ ಏರಿಕೆಯಾಗಿದೆ.

 

 

Live Tv

Leave a Reply

Your email address will not be published.

Back to top button