ದುನಿಯಾ ವಿಜಿ ಮನೆಗೆ ಹೋಗದಂತೆ ನಾಗರತ್ನಗೆ ನಿರ್ಬಂಧ

Public TV
2 Min Read
nagaratna

ಬೆಂಗಳೂರು: ನಟ ದುನಿಯಾ ವಿಜಯ್ ಮನೆಗೆ ಹೋಗದಂತೆ ಮೊದಲ ಪತ್ನಿ ನಾಗರತ್ನಗೆ ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯ ಮಧ್ಯಂತರ ಆದೇಶವನ್ನು ನೀಡಿದೆ. ದುನಿಯಾ ವಿಜಯ್ ವಿರುದ್ಧ ಮಾಧ್ಯಮಗಳಿಗೆ ಸಂದರ್ಶನ ನೀಡುವಂತಿಲ್ಲ. ದುನಿಯಾ ವಿಜಿ ಆಗಲಿ ಅವರ ಕುಟುಂಬಸ್ಥರ ವಿರುದ್ಧವೂ ಬಹಿರಂಗವಾಗಿ ಹೇಳಿಕೆ ನೀಡುವಂತಿಲ್ಲ. ಪ್ರಕರಣದ ವಿಚಾರಣೆಯ ವೇಳೆ ಕ್ಯಾಮೆರಾ ಬಳಸುವಂತೆಯೂ ಸೂಚನೆ ನೀಡಲಾಗಿದೆ.

ಕೆಲವು ದಿನಗಳ ಹಿಂದೆ ದುನಿಯಾ ಪತ್ನಿಯರ ಜಡೆ ಜಗಳವನ್ನು ಇಡೀ ರಾಜ್ಯವೇ ನೋಡಿತ್ತು. ಪತ್ನಿಯರಿಬ್ಬರ ಜಗಳದಿಂದ ಬೇಸತ್ತ ವಿಜಿ ಮೊದಲ ಪತ್ನಿ ನಾಗರತ್ನರಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಮಧ್ಯಂತರ ಆದೇಶವನ್ನು ನೀಡಿದೆ.

Duniya Vijay Keerthi Gowda Nagarathna

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದ ದುನಿಯಾ ವಿಜಯ್, ಈ ಮೊದಲೇ ನಾನು ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದ್ದೆ. ಆದರೆ ವಕೀಲರ ಮುಂದೆ ಒಪ್ಪಂದ ಆಗಿದ್ದ ಕಾರಣ ನಾನು 2 ವರ್ಷ ಸುಮ್ಮನೆ ಇದ್ದೆ. ಶನಿ ಕಾಟ ಇದ್ರೂ ಪಾರಾಗ್ತಾರೆ, ಆದರೆ ಹೆಂಡತಿ ಕಾಟದಿಂದ ಪಾರಾಗಲು ಸಾಧ್ಯವೇ ಇಲ್ಲ. ನಾನು ಎಂದೂ ಶಾಂತಿ ಭಂಗ ಮಾಡಿಲ್ಲ. ಆಕೆಯೇ ನನಗೆ ಶಾಂತಿ ಇಲ್ಲದಂತೆ ಮಾಡಿದ್ದಾರೆ. ನಾನು ಏನೂ ತಪ್ಪು ಮಾಡಿಲ್ಲ. ಆದರೆ ಜನತೆಗೆ ಸುಳ್ಳು ಹೇಳಿಕೆ ನೀಡಿ ನನ್ನ ಹೆಸರು ಹಾಳು ಮಾಡಲು ಯತ್ನಿಸಿದ್ದು ನನಗೆ ಬೇಸರ ತಂದಿತ್ತು ಎಂದು ಹೇಳಿದ್ದರು.

2 ವರ್ಷಗಳ ಕಾಲ ಎಷ್ಟೇ ನೋವು ನೀಡಿದರೂ ಸಹನೆಯಿಂದ ಇದ್ದೆ. ಆದರೆ ಈಗ ಎಲ್ಲದಕ್ಕೂ ಕೊನೆಗಾಣಿಸಬೇಕೆಂದು ವಿಡಿಯೋ ನೀಡಿ ಪೂರ್ಣ ವಿರಾಮ ಹಾಕಿದ್ದೇನೆ. ನನ್ನ ಮೇಲೆ ಇಲ್ಲ ಸಲ್ಲದ ನಕಲಿ ಎಫ್‍ಐಆರ್ ಮಾಡಿದ್ದರು. ಆದರೂ ಸುಮ್ಮನೆ ಇದ್ದೆ. ಇದನ್ನು ಸಹಿಸಲು ಸಾಧ್ಯವಾಗದೇ ಆಕೆ ಮತ್ತೆ ಇಷ್ಟೆಲ್ಲಾ ಮಾಡಿದ್ದಾರೆ. ನನ್ನ ತಾಯಿಯ ಮೇಲೂ 2 ಬಾರಿ ಹಲ್ಲೆ ನಡೆದಿತ್ತು, ಆದರೆ ನಾನು ಗೌರವಕ್ಕೆ ಅಂಜಿ ಮಾತನಾಡಿರಲಿಲ್ಲ ಎಂದು ತಿಳಿಸಿದರು.

duniya viji copy

ನನ್ನ ಬದುಕನ್ನೇ ಆಕೆ ಮುಗಿಸಲು ಯತ್ನ ಮಾಡಿದ್ದಾರೆ. ಇಷ್ಟು ಕಷ್ಟ ಅನುಭವಿಸಿದ್ದಕ್ಕೆ ಕೀರ್ತಿ ನನಗೆ ಸಿಕ್ಕಿದ್ದು ಅದೃಷ್ಟ. ದೇವರು ನನಗೆ ಕೀರ್ತಿಯನ್ನು ನೀಡಿದ್ದಾರೆ. ಆದರೆ ನನಗೆ ಈಗಲೂ ನೋವು ಇದೆ. ನನ್ನ ಹೆಣ್ಣು ಮಕ್ಕಳ ಜೀವನ ಹಾಳು ಮಾಡಿದ್ದಾರೆ. ನನ್ನ ವಿರುದ್ಧವೇ ಮಕ್ಕಳು ದೂರು ನೀಡುವಂತೆ ಮಾಡಿದ್ದಾರೆ ಎಂದು ಹೇಳುವ ಮೂಲಕ ಎರಡನೇ ಪತ್ನಿ ಕೀರ್ತಿಯನ್ನು ದುನಿಯಾ ವಿಜಯ್ ಕೊಂಡಾಡಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Share This Article