ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ (Darshan), ಪವಿತ್ರಾ ಗೌಡ (Pavithra Gowda) ಸೇರಿದಂತೆ 12 ಮಂದಿಯನ್ನು ಮತ್ತೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.
ಪ್ರಕರಣ ಸಂಬಂಧ ಇಂದು 42ನೇ ಎಸಿಎಂಎಂ ನ್ಯಾಯಾಲಯ ವಿಚಾರಣೆ ನಡೆಸಿತು. ಕೊಲೆ ಆರೋಪ ಎದುರಿಸುತ್ತಿರುವವರ ಪೈಕಿ 12 ಆರೋಪಿಗಳನ್ನು 5 ದಿನಗಳ ಕಾಲ ಮತ್ತೆ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ. ಇದನ್ನೂ ಓದಿ: ಫಿಲ್ಮ್ ಚೇಂಬರ್‌ನಿಂದ ರೇಣುಕಾಸ್ವಾಮಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ – ಶಾಶ್ವತ ಪರಿಹಾರದ ಭರವಸೆ!
ಎ1 ಆರೋಪಿ ಪವಿತ್ರಾ ಗೌಡ, ಎ2 ದರ್ಶನ, ಎ3 ಪವನ್, ಎ4 ರಾಘವೇಂದ್ರ, ಎ5 ನಂದೀಶ್, ಎ6 ಜಗದೀಶ್, ಎ7 ಅನುಕುಮಾರ್, ಎ10 ವಿನಯ್, ಎ11 ನಾಗರಾಜ್, ಎ12 ಲಕ್ಷ್ಮಣ್, ಎ13 ದೀಪಕ್, ಎ14 ಪ್ರದೋಶ್, ಎ16 ನಿಖಿಲ್ ಆರೋಪಿಗಳನ್ನು ಪೊಲೀಸ್ ಕಸ್ಟಡಿಗೆ ನ್ಯಾಯಾದೀಶರು ಒಪ್ಪಿಸಿದ್ದಾರೆ.
ಕೋರ್ಟ್ ಹಾಲ್‌ನಲ್ಲಿ ಆರೋಪಿ ಪವಿತ್ರಾ ಗೌಡ ಕಣ್ಣೀರು ಹಾಕಿದರು. ಪೊಲೀಸರು ತೊಂದರೆ ಕೊಟ್ಟಿದ್ದಾರೆಯೇ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಅದಕ್ಕೆ ದರ್ಶನ್ ಹಾಗೂ ಪವಿತ್ರಾ ಗೌಡ, ಇಲ್ಲ ಎಂದು ಉತ್ತರಿಸಿದರು. ಇದನ್ನೂ ಓದಿ: `ಡಿ’ಬಾಸ್ ಬಗ್ಗೆ ಮಾತಾಡಿದ್ರೆ ಜೀವಂತ ಸುಡೋದಾಗಿ ಬೆದರಿಕೆ – ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ವಶಕ್ಕೆ
ಸರ್ಕಾರದ ಎಸ್‌ಎಸ್‌ಪಿ ಪ್ರಸನ್ನಕುಮಾರ್ ವಾದ ಮಂಡಿಸಿ, ಆರೋಪಿಗಳಿಂದ 10 ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಸಿಡಿಆರ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ಆರೋಪಿಗಳ ಮೊಬೈಲ್ ರಿಟ್ರೀವ್ ಮಾಡಬೇಕಿದೆ. 30 ಲಕ್ಷ ರೂ. ಹಣವನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಐಪಿಡಿಆರ್ ಡೇಟಾಗಾಗಿ ಪೊಲೀಸರು ಕಾಯುತ್ತಿದ್ದಾರೆ. ಬಂಧಿತರ ವಿಚಾರಣೆ ನಡೆಸಲಿದೆ. ಹೀಗಾಗಿ ಪೊಲೀಸರ ವಶಕ್ಕೆ ನೀಡುವಂತೆ ಮನವಿ ಮಾಡಿದರು.
ಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ಸಿಡಿಯನ್ನು ಪೊಲೀಸರು ನೀಡಿದರು. ಎ1-ಎ5 ಹಾಗೂ ಎ10 ಇಂದ ಎ14 ವರೆಗಿನ ಆರೋಪಿಗಳು ಕಸ್ಟಡಿಗೆ ಬೇಕಿದೆ. ದರ್ಶನ್ ಮತ್ತು ಪವಿತ್ರಾ ಗೌಡರನ್ನು ಮತ್ತೆ ಕಸ್ಟಡಿಗೆ ನೀಡಬೇಕು. ಪ್ರಕರಣದಲ್ಲಿ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ವಿಚಾರಣೆ ಅವಶ್ಯಕತೆಯಿದ್ದು, ಕಸ್ಟಡಿಗೆ ನೀಡುವಂತೆ ಎಸ್‌ಪಿಪಿ ಕೇಳಿದರು. ಇದೇ ವೇಳೆ ಸ್ಥಳ ಮಹಜರು ಮತ್ತು ವಾಹನಗಳ ಜಪ್ತಿ ಕುರಿತು ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ಇದನ್ನೂ ಓದಿ: ದರ್ಶನ್ ಗ್ಯಾಂಗ್‌ನಿಂದ ಹತ್ಯೆ ಕೇಸ್; ಸರ್ಕಾರದ ಎಸ್‌ಪಿಪಿಯಾಗಿ ಪ್ರಸನ್ನಕುಮಾರ್ ನೇಮಕ
ಮತ್ತೆ ಪೊಲೀಸ್ ಕಸ್ಟಡಿಗೆ ನೀಡುವುದಕ್ಕೆ ದರ್ಶನ್ ಪರ ವಕೀಲ ಅನಿಲ್ ಬಾಬು ಆಕ್ಷೇಪ ವ್ಯಕ್ತಪಡಿಸಿದರು. ಎ13, ಎ5ಗೆ ಪೊಲೀಸರು ಎಲೆಕ್ಟ್ರಿಕ್ ಶಾಕ್ ನೀಡಿದ್ದಾರೆ ಎಂದು ಎಂದು ನ್ಯಾಯಾಲಯದ ಗಮನಕ್ಕೆ ತಂದರು.
ಪವಿತ್ರಾ ಅವರು 6 ದಿನಗಳ ಕಾಲ ವಿಚಾರಣೆ ಎದುರಿಸಿದ್ದಾರೆ. ಆರೋಪಿಗಳ ಪೈಕಿ ಮಹಿಳೆ ನೋವು ಅನುಭವಿಸಿದ್ದಾರೆ. ಆರೋಪಿಗಳ ಹೇಳಿಕೆ ಹೊರಗೆ ಸೋರಿಕೆಯಾಗುತ್ತಿದೆ. ರಿಮ್ಯಾಂಡ್ ಅರ್ಜಿ ನೀಡುತ್ತಿಲ್ಲ. ಇದುವರೆಗೂ ನಮಗೆ ರಿಮ್ಯಾಂಡ್ ಅರ್ಜಿ ಬಂದಿಲ್ಲ. ನಮ್ಮ ಭೇಟಿಗೆ ಬಿಡುತ್ತಿಲ್ಲ. ಐದು ದಿನ ವಿಚಾರಣೆ ಮಾಡಿದರೂ ರಿಮ್ಯಾಂಡ್ ಅಪ್ಲಿಕೇಷನ್ ನೀಡಿಲ್ಲ ಎಂದು ಪವಿತ್ರಾ ಗೌಡ ಪರ ವಕೀಲರು ತಿಳಿಸಿದರು. ಇದನ್ನೂ ಓದಿ: ಪೊಲೀಸ್ ಕಸ್ಟಡಿಯಲ್ಲಿ ಪವಿತ್ರಾ ಗೌಡ ಧಿಮಾಕು!
ಎಲ್ಲದಕ್ಕೂ ಆರೋಪಿ ದರ್ಶನ್ ಕಾರಣ ಅಂತಾ ಹೇಳೋದು ಎಷ್ಟು ಸರಿ ಎಂದು ದರ್ಶನ್ ಪರ ವಕೀಲ ಅನಿಲ್ ಬಾಬು ನ್ಯಾಯಾಧೀಶರ ಮುಂದೆ ಪ್ರಶ್ನೆಯನ್ನಿಟ್ಟರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಆರೋಪಿಗಳನ್ನು ಮತ್ತೆ 5 ದಿನ ಕಸ್ಟಡಿಗೆ ವಹಿಸಿ ಆದೇಶ ಹೊರಡಿಸಿದ್ದಾರೆ. ಜೂ.20 ರವರೆಗೆ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿ ಇರಬೇಕಾಗಿದೆ.