ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ (Renukaswamy Case) ಕೊಲೆ ಪ್ರಕರಣವು ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಿದೆ. ಪ್ರಕರಣದ ಕುರಿತು ಬಿರುಸಿನ ತನಿಖೆ ನಡೆಸುತ್ತಿರುವ ಪೊಲೀಸರು ಮೈಸೂರಿನಲ್ಲಿಯೂ ಮಹಜರು ನಡೆಸಲಿದ್ದಾರೆ.
ರೇಣುಕಾಸ್ವಾಮಿ ಕೊಲೆ ಬಳಿಕ ಎ-2 ಆರೋಪಿ ದರ್ಶನ್ (Challenging Star Darshan) ಮೈಸೂರಿಗೆ ತೆರಳಿದ್ದರು. ಖಾಸಗಿ ಹೊಟೇಲ್‍ನಲ್ಲಿ ವಾಸ್ತವ್ಯ ಹೂಡಿದ್ದ ದರ್ಶನ್, ಅಲ್ಲಿಂದಲೇ ಮೃತದೇಹ ವಿಲೇವಾರಿ ಮಾಡಲು ಫೋನ್ ಮಾಡಿರುವ ಶಂಕೆ ವ್ಯಕ್ತವಾಗುತ್ತಿದೆ. ಅಲ್ಲದೇ ಆರೋಪಿಗಳು ಸರೆಂಡರ್ ಆಗಲು ಮೀನಾಮೇಷ ಎಣಿಸಲಾಗಿತ್ತು. ಮೈಸೂರಿನಲ್ಲಿ ದರ್ಶನ್ ಭೇಟಿಯಾಗಿದ್ದ ಬಗ್ಗೆ ಮಾಹಿತಿ ಸಿಕ್ಕಿದ್ದರಿಂದ ಪೊಲೀಸರು ಮೈಸೂರಿಗೆ ತೆರಳಿ ತನಿಖೆ ನಡೆಸಲಿದ್ದಾರೆ.
ದರ್ಶನ್ ತಂಗಿದ್ದ ಹೊಟೇಲ್ ರೂಂ ಹಾಗೂ ಇತರೆಡೆ ತನಿಖೆ ನಡೆಸಲಿದ್ದಾರೆ. ಹೊಟೇಲ್‍ನಲ್ಲಿ (Mysuru Hotel) ಪರಿಶೀಲನೆ ನಡೆಸಿ ಮಹಜರು ನಡೆಸುವ ಸಾಧ್ಯತೆಗಳಿವೆ. ಹೀಗಾಗಿ ಇಂದು ದರ್ಶನ್ ಮೈಸೂರಿಗೆ ಕರೆದೊಯ್ಯಲು ಸಿದ್ಧತೆ ನಡೆಸಲಾಗುತ್ತಿದೆ. ದರ್ಶನ್ ವಿಚಾರವಾಗಿ ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುತ್ತಿದ್ದು, ಹೆಚ್ಚಿನ ಸಾಕ್ಷ್ಯಗಳನ್ನ ಸಂಗ್ರಹಿಸಲು ಇಂಚಿಂಚೂ ಪರಿಶೀಲನೆ ನಡೆಸಲಾಗುತ್ತಿದೆ. ಇದನ್ನೂ ಓದಿ: ಸ್ಕಾರ್ಪಿಯೋ ವಾಶ್ ಮಾಡಿಸಿ ಸಾಕ್ಷಿ ನಾಶ ಯತ್ನ – ಕಾರ್ಪೆಟ್‌ನಲ್ಲಿದ್ದ ರಕ್ತದ ಕಲೆಯಿಂದ ಸಿಕ್ತು ಸುಳಿವು
3 ಕೋಟಿಯ ಕಾರಿಗೂ ಬರುತ್ತಾ ಕಂಟಕ?: ತನಿಖೆ ಸಾಗುತ್ತಿದ್ದಂತೆ ದರ್ಶನ್ ಕಾರಿನ ಮೇಲೆ ಖಾಕಿ ಕಣ್ಣು ಬಿದ್ದಿದೆ. ಕೃತ್ಯ ನಡೆದ ಬಳಿಕ ದರ್ಶನ್ 3 ಕೋಟಿ ಮೌಲ್ಯದ ಡಿಫೆಂಡರ್ ಕಾರಿನಲ್ಲಿ ಮೈಸೂರಿಗೆ ತೆರಳಿದ್ದರು. ಆ ಸಮಯದಲ್ಲಿ ದರ್ಶನ್ ಬಳಸಿದ್ದ ಕಾರನ್ನು ಇದೀಗ ಪೊಲೀಸರು ಪರಿಶೀಲಿಸೋ ಸಾಧ್ಯತೆ ಇದೆ.
ದರ್ಶನ್‍ನ ವಶಕ್ಕೆ ಪಡೆಯುವಾಗ ತನ್ನ ಕಾರಲ್ಲೇ ಬರೋದಾಗಿ ಹೇಳಿದ್ದರು. ಇದಕ್ಕೆ ಒಪ್ಪದ ಪೊಲೀಸರು ತಮ್ಮ ಬೊಲೆರೊ ಜೀಪ್‍ನಲ್ಲೇ ಕರೆತಂದಿದ್ದರು. ಹೀಗಾಗಿ ಕಳೆದ ಮಂಗಳವಾರದಿಂದ ಕಾರು ಮೈಸೂರಿನ ಹೋಟೆಲ್ ಬಳಿ ಇದೆ. ಈ ಆಯಾಮದಲ್ಲೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ.