ಚಿಕ್ಕಮಗಳೂರು: ಬಾರ್ ಓಪನ್ ಆದ ಒಂದೇ ವರ್ಷದಲ್ಲಿ ಬಾರ್ ಮುಂದೆ ನಡೆದ ಅಪಘಾತದಿಂದ ಏಳಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಹಾಗಾಗಿ ಕೂಡಲೇ ಬಾರ್ ಬಂದ್ ಮಾಡುವಂತೆ ಸ್ಥಳೀಯರು ಬಾರ್ ಮುಂದೆ ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಕಳಸಾಪುರ ಸಮೀಪದ ಭಕ್ತರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಎರಡು ದಿನಗಳ ಹಿಂದೆ ಇದೇ ಬಾರ್ ಮುಂದೆ ಬಾರ್‌ನಿಂದ ಹೊರಬಂದ ಇಬ್ಬರು ಯುವಕರಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕಳೆದೊಂದು ವರ್ಷದಲ್ಲಿ ಸುಮಾರು ಏಳಕ್ಕೂ ಹೆಚ್ಚು ಜನ ಇದೇ ಬಾರ್ ಮುಂದೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಇದರಿಂದ ಕುಟುಂಬದ ಮುಖ್ಯಸ್ಥರನ್ನು ಕಳೆದುಕೊಂಡು ಬಡಕುಟುಂಬಗಳು ಬೀದಿಗೆ ಬೀಳುತ್ತಿವೆ. ಆ ಕುಟುಂಬಗಳನ್ನು ನೋಡಿಕೊಳ್ಳುವುದು ಯಾರೆಂದು ಸ್ಥಳೀಯರು ಸರ್ಕಾರಕ್ಕೆ ಪ್ರಶ್ನಿಸಿದ್ದು, ಪದೇ ಪದೇ ಇಂತಹ ಪ್ರಕರಣಗಳು ನಡೆಯುತ್ತಿರುವುದರಿಂದ ರೊಚ್ಚಿಗೆದ್ದ ಜನ ಕೂಡಲೇ ಬಾರ್ ಬಂದ್ ಮಾಡುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಹೊಳೆನರಸೀಪುರ ಕೋರ್ಟ್ ಆವರಣದಲ್ಲಿಯೇ ಪತ್ನಿಯ ಕತ್ತು ಸೀಳಿದ ಪತಿ
ಇಂದು ಊರಿನ ಜನ ಬಾರ್ ಮುಂದೆ ಪ್ರತಿಭಟನೆ ನಡೆಸಿ ಬಾರ್ ಕ್ಲೋಸ್ ಮಾಡುವಂತೆ ಆಗ್ರಹಿಸಿದ್ದಾರೆ. ಈ ವೇಳೆ, ಬಾರ್ ಮಾಲೀಕರು, ಸ್ಥಳೀಯರು ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ಕೂಡ ನಡೆದಿದೆ. ಸ್ಥಳಕ್ಕೆ ಅಬಕಾರಿ ಇಲಾಖೆ ಹಾಗೂ ಡಿವೈಎಸ್‍ಪಿ ಭೇಟಿ ನೀಡಿ ಪ್ರತಿಭಟನಾನಿರತರನ್ನು ಸಮಾಧಾನ ಮಾಡಿದ್ದಾರೆ. ಮುಂದಿನ 10 ದಿನಗಳವರೆಗೆ ಬಾರ್ ಓಪನ್ ಮಾಡದಂತೆ ಬಾರ್ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ. 10 ದಿನಗಳ ಒಳಗೆ ಬಾರ್ ಸ್ಥಳಾಂತರಿಸುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದ್ದಾರೆ. ಇದನ್ನೂ ಓದಿ: ಮಲೆನಾಡಲ್ಲಿ ಮಳೆ ಅವಾಂತರ – ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿಯಲ್ಲಿ ಬಿರುಕು ಬಿಟ್ಟ ರಸ್ತೆ
ಸ್ಥಳೀಯರು ಕೂಡ ತಾತ್ಕಾಲಿಕವಾಗಿ ಪ್ರತಿಭಟನೆಯನ್ನು ಹಿಂಪಡೆದಿದ್ದಾರೆ. 10 ದಿನಗಳಲ್ಲಿ ಬಾರ್ ಕ್ಲೋಸ್ ಆಗಬೇಕು ಅಥವಾ ಸ್ಥಳಾಂತರಗೊಳ್ಳಬೇಕು. ಒಂದು ವೇಳೆ ಬಾರ್ ಮತ್ತೆ ಓಪನ್ ಆದರೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
Live Tv
[brid partner=56869869 player=32851 video=960834 autoplay=true]