ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಸ್ಟೀಲ್, ಇನ್ಫೋಸಿಸ್, ಪತಂಜಲಿ ಸೇರಿದಂತೆ 11 ಖಾಸಗಿ ಸಂಸ್ಥೆಗಳು ಹಾಗೂ 64 ವಿಮಾನ ನಿಲ್ದಾಣಗಳಿಗೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು (ಸಿಐಎಸ್‌ಎಫ್) ರಕ್ಷಣೆ ಒದಗಿಸುತ್ತಿದೆ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರಾಯ್ ತಿಳಿಸಿದ್ದಾರೆ.
ಬೆದರಿಕೆ ಕಾರಣ ಹಾಗೂ ನಿರ್ವಹಣೆಯ ಬದ್ಧತೆ ದೃಷ್ಟಿಯಿಂದ ಸಿಐಎಸ್‌ಎಫ್ ನಿಯೋಜಿಸಲಾಗುವುದು. ಪ್ರಸ್ತುತ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ವಲಯಕ್ಕೆ ಸಿಐಎಸ್‌ಎಫ್ ನಿಯೋಜಿಸಲಾಗಿದೆ ಎಂದು ರಾಜ್ಯಸಭೆಯಲ್ಲಿ ಕೇಳಿಬಂದ ಪ್ರಶ್ನೆಯೊಂದಕ್ಕೆ ರಾಯ್ ಉತ್ತರಿಸಿದ್ದಾರೆ. ಇದನ್ನೂ ಓದಿ: ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ಇಲ್ಲದಿದ್ರೆ ನೌಕರರಿಗೆ ಸಂಬಳ ನೀಡಲ್ಲ – ಪಂಜಾಬ್ ಸರ್ಕಾರ
ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರೀಸ್, ಬೆಂಗಳೂರು, ಮೈಸೂರು ಮತ್ತು ಪುಣೆಯಲ್ಲಿರುವ ಇನ್ಫೋಸಿಸ್ ಸಂಸ್ಥೆ, ಹರಿದ್ವಾರದ ಪತಂಜಲಿ ಆಹಾರ ಮತ್ತು ಗಿಡಮೂಲಿಕೆ ಉದ್ಯಾನ, ಮುಂಬೈನ ರಿಲಯನ್ಸ್ ಕೋ ಆಪರೇಟಿವ್ ಪಾರ್ಕ್ ಕ್ಯಾಂಪಸ್, ಜಾಮ್‌ನಗರದ ನಾಯರ್ ಎನರ್ಜಿ ಲಿಮಿಟೆಡ್, ಹೈದರಾಬಾದ್ ಭಾರತ್ ಬಯೋಟೆಕ್ ಅಂತಾರಾಷ್ಟ್ರೀಯ ಲಿಮಿಟೆಡ್, ಹೋಟೆಲ್ ಟರ್ಮಿನಲ್ 1ಸಿಗೆ ಸಿಐಎಸ್‌ಎಫ್ ಭದ್ರತೆ ಒದಗಿಸಲಾಗಿದೆ.
ಸಿಐಎಸ್‌ಎಫ್ ಕಾಯಿದೆ-1968ರ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿ ಉದ್ಯಮ, ಖಾಸಗಿ ಕೈಗಾರಿಕಾ ಉದ್ಯಮ, ನಿಯಂತ್ರಿತ ಕೈಗಾರಿಕಾ ಉದ್ಯಮಗಳ ರಕ್ಷಣೆ ಮತ್ತು ಭದ್ರತೆಗಾಗಿ ಸ್ಥಾಪಿಸಲಾಗಿದೆ ಎಂದು ರಾಯ್ ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಳಯ್ ಕ್ಷಿಪಣಿಯ ಯಶಸ್ವಿ ಪರೀಕ್ಷೆ – ದೇಶದ ರಕ್ಷಣಾ ಕ್ಷೇತ್ರಕ್ಕೆ ಆನೆ ಬಲ